ಕೊಡಗು : ಎರಡೂವರೆ ತಿಂಗಳ ಬಳಿಕ ದೇವಾಲಯಗಳನ್ನು ತೆರೆದಿದ್ದರಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಬರುವ ನಿರೀಕ್ಷೆ ಇತ್ತು. ಹೀಗಾಗಿಯೇ ದೇವಾಲಯದ ಬಳಿ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಅಲ್ಲದೆ ನೂಕುನುಗ್ಗಲು ಆಗಬಾರದೆಂದು ಪ್ರತಿ ಮೂರು ಅಡಿ ಅಂತರದಲ್ಲಿ ಮಾರ್ಕ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಸಹ ಮಾಡಲಾಗಿತ್ತು.
ಸಾಕಷ್ಟು ಒತ್ತಡಗಳ ನಂತರ ಕೊಡಗಿನ ಪ್ರಸಿದ್ಧ ದೇವಾಲಯಗಳಾದ ಓಂಕಾರೇಶ್ವರ, ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯ ಸೇರಿ ಹಲವು ದೇವಾಲಯಗಳನ್ನು ಇಂದಿನಿಂದ ತೆರೆಯಲಾಗಿದೆ. ಆದರೆ, ಈ ದೇವಾಲಯಗಳಿಗೂ ಆಗೊಬ್ಬರು, ಈಗೊಬ್ಬರು ಎಂಬಂತೆ ಬೆರಣೆಳಿಕೆಯಷ್ಟು ಭಕ್ತರು ಮಾತ್ರ ಬಂದು ಹೋಗುತ್ತಿದ್ದಾರೆ.
ಹೀಗಾಗಿ ದೇವಾಲಯ ಸಂಪೂರ್ಣ ಖಾಲಿ ಖಾಲಿಯಾಗಿರೋದು ಕಂಡು ಬಂತು. ಸರ್ಕಾರದ ಮಾರ್ಗಸೂಚಿಗಳಂತೆ ದೇವಾಲಯಗಳಿಗೆ ಬರುತ್ತಿರುವ ಭಕ್ತರನ್ನು ದೇವಾಲಯದ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೆ ಪ್ರತೀ ಭಕ್ತರಿಗೆ ಸ್ಯಾನಿಟೈಸರ್ ಕೂಡ ಹಾಕಲಾಗುತ್ತಿದೆ. ಜತೆಗೆ ದೇವಾಲಯಗಳಿಗೆ ಬರುವ ಭಕ್ತರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದೇ ಇದ್ದಲ್ಲಿ ಅಂತವರಿಗೆ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಆದರೂ ದೇವಾಲಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಭಕ್ತರು ಬರುತ್ತಿದ್ದು, ಜನರಿಗೆ ಕೊರೊನಾ ಆತಂಕ ದೂರವಾಗಿಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ.