ಕೊಡಗು: ನಾಲ್ಕು ವರ್ಷಗಳ ನಂತರ ಕೊಡಗಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ನಾಳೆಯಿಂದ ಏಪ್ರಿಲ್ 9 ರವರೆಗೆ ಉತ್ಸವ ನಡೆಯಲಿದ್ದು ಸುಮಾರು 336 ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ಹಾಕಿ ಉತ್ಸವ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವ ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿತ್ತು. ಇದೀಗ ಪುನರಾರಂಭವಾಗಿದ್ದು ಸಂಭ್ರಮ ಕಳೆಗಟ್ಟಿದೆ. ಪ್ರತೀ ವರ್ಷ ಜಿಲ್ಲೆಯಲ್ಲಿ ಒಂದೊಂದು ಕುಟುಂಬಗಳು ಕೊಡವ ಹಾಕಿ ಉತ್ಸವದ ಜವಾಬ್ದಾರಿ ವಹಿಸಿಕೊಳ್ಳುತ್ತವೆ. ಈ ಬಾರಿ ಅಪ್ಪಚೆಟ್ಟೊಳಂಡ ಕುಟುಂಬ ಸಾರಥ್ಯ ವಹಿಸಿದ್ದಾರೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ 23ನೇ ವರ್ಷದ ಹಾಕಿ ಉತ್ಸವ ನಡೆಯಲಿದ್ದು ಮೈದಾನಗಳು ಸಜ್ಜಾಗಿವೆ. ಕೊಡವ ಹಾಕಿ ಪಂದ್ಯಾವಳಿ 2018ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿತ್ತು.
ವಿಶೇಷತೆ: ಕೊಡಗಿನಲ್ಲಿ ನಡೆಯುವ ಈ ಹಾಕಿ ಪಂದ್ಯವಳಿ ಬೇರೆ ಭಾಗಗಳಿಗೆ ಹೋಲಿಸಿದ್ರೆ ವಿಭಿನ್ನ. ಕೌಟುಂಬಿಕ ಹಾಕಿಯಲ್ಲಿ ಯಾವುದೇ ವಯಸ್ಸಿನ ಅಂತರ ಇರುವುದಿಲ್ಲ. ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳೆನ್ನುವ ಭೇದಭಾವವಿಲ್ಲದೆ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸುತ್ತಾರೆ. ಇದರಿಂದಾಗಿ ಕ್ರೀಡಾಕೂಟ ಜನಮನ್ನಣೆ ಗಳಿಸಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿದೇಶದಲ್ಲಿ ನೆಲೆಸಿರುವ ಜಿಲ್ಲೆಯವರು ಕೂಟದಲ್ಲಿ ಭಾಗವಹಿಸುತ್ತಾರೆ.
ಉತ್ಸವ ಸಮಿತಿ ಅಧ್ಯಕ್ಷ ಮನುಮುತ್ತಪ್ಪ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, "ಹಾಕಿ ಉತ್ಸವ ಮೂರು ಮೈದಾನಗಳಲ್ಲಿ ನಡೆಯಲಿದ್ದು ಈಗಾಗಲೇ ಸಿದ್ಧತೆಗಳು ನಡೆದಿವೆ. ಕ್ರೀಡಾಕೂಟವನ್ನು ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡುತ್ತಿದ್ದು ಮತ್ತಷ್ಟು ಪ್ರೋತ್ಸಾಹ ದೊರೆಯಲಿದೆ. ಕ್ರೀಡಾ ಸಚಿವರು, ಉಸ್ತುವಾರಿ ಸಚಿವರು ಸೇರಿದಂತೆ ಗಣ್ಯರು ಆಗಮಿಸುತ್ತಿದ್ದಾರೆ. 336 ತಂಡಗಳು ಭಾಗವಹಿಸುತ್ತಿದ್ದು, ಇದೊಂದು ವಿಶ್ವದಾಖಲೆ ಎನ್ನಲಾಗುತ್ತಿದೆ. 2018ರಲ್ಲಿ ನಡೆದ ಕ್ರೀಡಾಕೂಟದಲ್ಲಿ 279 ತಂಡಗಳು ಭಾಗಿಯಾಗಿದ್ದವು" ಎಂದರು.
ಇದನ್ನೂ ಓದಿ: ಉಳ್ಳಾಲದಲ್ಲಿ ಪ್ರಥಮ ಸರ್ಕಾರಿ ಕಂಬಳ ಕರೆ ಉದ್ಘಾಟನೆ: ನಿಂತು ಹೋಗಿದ್ದ ಲವ ಕುಶ ಜೋಡುಕರೆ ಕಂಬಳಕ್ಕೆ ಮತ್ತೆ ಚಾಲನೆ