ಮಡಿಕೇರಿ: ಪ್ರವಾಸೋದ್ಯಮಕ್ಕೆ ಹೆಸರುವಾಸಿ, ಹಾಕಿಯ ತವರೂರು, ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರೋ ಕೊಡಗು ಸೇನಾ ನಾಡು ಅಂತಾನೇ ಖ್ಯಾತಿ ಗಳಿಸಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಸ್ಕಾವಡನ್ ಲೀಡರ್ ಅಜ್ಜಮಾಡ ದೇವಯ್ಯರಂತಹ ಧೀರರನ್ನು ರಾಷ್ಟ್ರಕ್ಕೆ ನೀಡಿದೆ.
ದೇಶದ ಸೇನೆಗೆ ಇದೀಗ ಕೊಡಗಿನಿಂದ ಮತ್ತೊಂದು ಕೊಡುಗೆ ನೀಡಲಾಗುತ್ತಿದೆ. ವಿಶ್ವ ಸಂಸ್ಥೆಯ ಶಾಂತಿ ಪಾಲಕರಾಗಿ ಕೊಡಗಿನ ಯೋಧರು ಪಾಲ್ಗೊಳ್ಳುತ್ತಿದ್ದಾರೆ. ವಿಶ್ವ ಸಂಸ್ಥೆ ತನ್ನ ಸಂಯುಕ್ತ ರಾಷ್ಟ್ರದ ಅಡಿಯಲ್ಲಿ ಬರುವಂತಹ ಕೆಲವೊಂದು ಸಣ್ಣ ದೇಶಗಳ ಆರ್ಥಿಕ ಮತ್ತು ರಕ್ಷಣಾತ್ಮಕ ನೆರವನ್ನು ತಲುಪಿಸಲು ತನ್ನ ಯುನೈಟೆಡ್ ನೇಶನ್ಸ್ ಫೋರ್ಸ್ ಅನ್ನು ಅಂತಹ ದೇಶದಲ್ಲಿ ನಿಯೋಜಿಸುತ್ತೆ. ಇದಕ್ಕಾಗಿ ತನ್ನ ಸಂಯುಕ್ತ ರಾಷ್ಟ್ರಗಳಲ್ಲಿ ಬಲಿಷ್ಟ ಸೇನೆಗಳಿಂದ ಕೆಲವೊಂದು ಸೈನಿಕರನ್ನು ಆಯ್ಕೆ ಮಾಡಿ ಕೆಲವೊಂದು ತಿಂಗಳವರೆಗೆ ತನ್ನ ಯುನೈಟೆಡ್ ನೇಶನ್ಸ್ ಫೋರ್ಸಸ್‌ನಲ್ಲಿ ಕಾರ್ಯ ನಿರ್ವಹಿಸಲು ವಿದೇಶಕ್ಕೆ ಕಳುಹಿಸುತ್ತದೆ.
ಇದೇ ರೀತಿ ಈ ಬಾರಿಯ ಯುನೈಟೆಡ್ ನೇಶನ್ಸ್ ಫೋರ್ಸ್ಲ್ಲಿ ಭಾರತೀಯ ಸೇನೆಯಿಂದ ಕೊಡಗಿನವರಾದ ಪೊನ್ನಂಪೇಟೆಯ ಪೆಮ್ಮಡ ರವೀಂದ್ರ, ಪಾಲಿಬೆಟ್ಟದ ಕರೋಟಿರ ಲೋಕೇಶ್ ,ಗಾಳಿಬೀಡಿನ ವಿನೋದ್ ಕಾಳಪ್ಪ, ಶನಿವಾರಸಂತೆಯ ಸತೀಶ್ ವಿ ದೊಡ್ಡಯ್ಯ , ಕಾಲೂರಿನ ಪೊನ್ನಚೆಟ್ಟೀರ ಪಳಂಗಪ್ಪ, ಮಡಿಕೇರಿ ಚಾಮುಂಡೇಶ್ವರಿ ನಗರದ ದಿನೇಶ್ ಪೂಜಾರಿ, ಮಡಿಕೇರಿ ಭಗವತಿ ನಗರದ ದೀಕ್ಷಿತ್ ಶೆಟ್ಟಿ, ಕಗ್ಗೋಡ್ಲುವಿನ ಭರತ್ ಪೂಜಾರಿ ಆಯ್ಕೆಯಾಗಿದ್ದಾರೆ.
ಇವರು ಇದೇ ಸೆಪ್ಟಂಬರ್ನಲ್ಲಿ ಲೆಬನಾನ್ ದೇಶದಲ್ಲಿ ನಡೆಯುವ ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ. ಇನ್ನು ವಿಶ್ವಸಂಸ್ಥೆಯ ಒಟ್ಟು 68 ಶಾಂತಿಪಾಲನಾ ಕಾರ್ಯಾಚರಣೆಗಳ ಪೈಕಿ 43 ಕಾರ್ಯಾಚರಣೆಗಳಿಗೆ ಭಾರತ ತನ್ನ ಯೋಧರನ್ನು ಕಳುಹಿಸಿಕೊಟ್ಟಿದೆ. 60 ವರ್ಷಗಳಲ್ಲಿ ಇದುವರೆಗೆ ಒಟ್ಟು 1,70,000 ಕ್ಕೂ ಹೆಚ್ಚು ಭಾರತೀಯ ಯೋಧರು ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.