ಕೊಡಗು: ತೋಟದ ಕೆಲಸದ ಕಾರ್ಮಿಕರನ್ನು ಮನೆಗೆ ಕರೆದೊಯ್ಯುತಿದ್ದ ಗೂಡ್ಸ್ ಆಟೋ ಮಗುಚಿಬಿದ್ದ ಪರಿಣಾಮ ಏಳು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮರೂರಿನಲ್ಲಿ ಸಂಜೆ ನಡೆದಿದೆ.
ಗಾಯಗೊಂಡ ಕಾರ್ಮಿಕರು ಹಾಸನ ಜಿಲ್ಲೆಯ ಮರಿಯಾ ನಗರದವರಾಗಿದ್ದು, ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿ ಬಿದ್ದಿದೆ. ಪರಿಣಾಮ ಆಟೋದಲ್ಲಿದ್ದ ಏಳು ಜನರಿಗೆ ಗಂಭೀರ ಗಾಯವಾಗಿವೆ. ಗಾಯಗೊಂಡ ಮಹಿಳೆಯರನ್ನು ಸೋಮವಾರಪೇಟೆ ಮತ್ತು ಕುಶಾಲನಗರ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದರಲ್ಲೂ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.