ಕೊಡಗು: ಕೊಡಗಿನ ಮಾಲೇಮಾಡಿನಲ್ಲಿ 12 ಎಕರೆ 70 ಸೆಂಟ್ಸ್ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದ್ದು, ಇದೀಗ ಗ್ರಾಮಸ್ಥರು ಅಲ್ಲಿರುವ 2 ಎಕರೆ ಸ್ಮಶಾನದ ಜಾಗ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಕುರಿತ ಪರ-ವಿರೋಧ ಚರ್ಚೆಯ ನಡುವೆ ಸ್ಟೇಡಿಯಂ ಕಾಮಗಾರಿ ಕುಂಟುತ್ತಾ ಸಾಗಿದೆ.
ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾದರೆ ಜಿಲ್ಲೆಯೂ ಅಭಿವೃದ್ಧಿ ಆಗುತ್ತದೆ ಎನ್ನುವ ಗ್ರಾಮಸ್ಥರು ಒಂದು ಕಡೆಯಾದರೆ, ಇನ್ನೊಂದು ಕಡೆ ತಮ್ಮ ಪೂರ್ವಜರ ಸಮಾಧಿ ಮೇಲೆ ಕ್ರಿಕೆಟ್ ಸ್ಟೇಡಿಯಂ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರ ಈಗಾಗಲೇ ಇವರಿಗೆ ಒಂದು ಎಕರೆ ಸ್ಮಶಾನ ಜಾಗ ಮಂಜೂರು ಮಾಡಿದ್ದು, 12 ಏಕರೆ 70 ಸೆಂಟ್ಸ್ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಸರ್ವೇ ಮಾಡಿ ಜಾಗ ಅಂತಿಮ ಮಾಡಿದೆ. ಆದರೆ ಪಾಲೆಮಾಡು ನಿವಾಸಿಗಳು ಮಾತ್ರ ಇದಕ್ಕೆ ಸುತಾರಮ್ ಒಪ್ಪುತ್ತಿಲ್ಲ.
ಪಾಲೇಮಾಡು ನಿವಾಸಿ ಮೊಣ್ಣಪ್ಪ ಮಾತನಾಡಿ, 'ನಾವು ಸುಮಾರು ವರ್ಷಗಳಿಂದಲೇ ಈ ಒಂದು ಜಾಗದಲ್ಲಿ ನಮ್ಮ ಪೂರ್ವಿಕರ ಶವ ಸಂಸ್ಕಾರ ಮಾಡಿದ್ದು, 150 ಮಂದಿಯ ಶವ ಸಂಸ್ಕಾರ ಮಾಡಿದ್ದೇವೆ. ಹಾಗಾಗಿ ಈ ಒಂದು ಪ್ರದೇಶದಲ್ಲಿ ನಾವು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಬಿಡುವುದಿಲ್ಲ' ಅಂತಿದ್ದಾರೆ. ಸ್ಟೇಡಿಯಂ ಮಾಡಲಿ ಆದ್ರೆ ನಮ್ಮವರ ಸಮಾಧಿಯ ಮೇಲೆ ಮಾಡುವುದು ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಜತೆಗೆ ಸ್ಮಶಾನದ ಜಾಗಕ್ಕೆ ಎರಡು ಏಕರೆ ಜಾಗ ಬೇಕೇ ಬೇಕು. ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ. ಇಲ್ಲಿ ಸುಮಾರು 119 ಏಕರೆ ಜಾಗ ಕೂಡ ಒತ್ತುವರಿಯಾಗಿದ್ದು, ಹದ್ಬಸ್ತ್ ಸರ್ವೇಗೆ ಪಾಲೆಮಾಡಿನ ಜನತೆ ಆಗ್ರಹಿಸುತ್ತಿದ್ದಾರೆ ಎಂದರು.
ಇಲ್ಲಿನ ಕೆಲವು ಗ್ರಾಮಸ್ಥರು ಸ್ಟೇಡಿಯಂ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದಾರೆ. ನಮ್ಮ ಊರಿನಲ್ಲಿ ಸ್ಟೇಡಿಯಂ ಆಗೋದು ನಮಗೊಂದು ಸುವರ್ಣಾವಕಾಶ. ಇದರಿಂದ ನಮ್ಮ ಗ್ರಾಮಗಳು, ಜಿಲ್ಲೆ ಕೂಡ ಅಭಿವೃದ್ಧಿ ಹೊಂದುತ್ತದೆ. ಅಲ್ಲದೆ ಸ್ಥಳೀಯ ನಿವಾಸಿಗಳಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಕೊಡಗು ಹೇಳಿ ಕೇಳಿ ಕ್ರೀಡಾ ಜಿಲ್ಲೆಯ ತವರೂರು ಯಾವುದೇ ಸೌಕರ್ಯಗಳಿಲ್ಲದೆ ಉನ್ನತ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.
ಇದೇ ರೀತಿಯ ಸ್ಟೇಡಿಯಂ ಮುಂತಾದವುಗಳು ನಿರ್ಮಾಣವಾದಾಗ ಕ್ರೀಡೆಗಳಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸ್ಮಶಾನದ ಹೆಸರಿನಲ್ಲಿ ಇಲ್ಲಿನ ಕೆಲ ನಿವಾಸಿಗಳು ತೊಂದರೆ ಮಾಡುತ್ತಿರುವುದು ಸರಿಯಲ್ಲ. ಅವರು ಯಾವುದೇ ಅಡಚಣೆಗಳನ್ನು ಮಾಡಿದರೂ ಕೂಡ ಸರ್ಕಾರದ ನಿಯಮಾನುಸಾರ ನಾವು ನಮ್ಮ ಕಾಮಗಾರಿ ಕೆಲಸಗಳನ್ನು ಮಾಡುತ್ತೇವೆ ಎಂದು ಸ್ಥಳೀಯ ಪೃಥ್ವಿ ದೇವಯ್ಯ ಹೇಳಿದರು.