ಕೊಡಗು: ಜಿಲ್ಲೆಯ ಕುಶಾಲನಗರ ಶಾಯಿ, ಶಂಕರ ಬಡಾವಣೆಯಲ್ಲಿ ಕಳೆದ ಮೂರು ವರ್ಷಗಳಿಂದ ವರುಣ ಸೃಷ್ಟಿಸಿದ ಅವಾಂತರ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಈಗ ಜಿಲ್ಲೆಯ ಜನರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ನದಿ ಪಾತ್ರದ ಜನರಿಗೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಪಟ್ಟಣ ಪಂಚಾಯತಿ ನೋಟಿಸ್ ನೀಡಿದೆ. ಆದ್ರೆ ಜನರು ಮಾತ್ರ ನಾವು ಪರ್ಯಾಯ ವ್ಯವಸ್ಥೆ ಮಾಡುವತನಕ ಇಲ್ಲಿಂದ ಎಲ್ಲಿಗೂ ಹೋಗಲಾರೆವು ಎನ್ನುತ್ತಿದ್ದಾರೆ.
ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಪಟ್ಟಣ ಪಂಚಾಯತಿ: ಕುಶಾಲನಗರ ನಗರದ ಕಾವೇರಿ ತೀರದ ಶಾಯಿ ಬಡಾವಣೆ, ಶಂಕರ ಬಡಾವಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು 2, 3 ಅಂತಸ್ತಿನ ಮನೆಗಳಿವೆ. ಇಲ್ಲಿ ಮಳೆಗಾಲ ಬಂದ್ರೆ ಸಾಕು ಸ್ಥಳೀಯರು ಪ್ರಾಣಭಯದಲ್ಲಿ ಜೀವನ ಕಳೆಯುತ್ತಾರೆ. ಕಳೆದ ವರ್ಷ ಸುರಿದ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದು ನೀರು ಬಡಾವಣೆಗಳಿಗೆ ನುಗ್ಗಿತ್ತು.
ಪರಿಣಾಮ ರಾತ್ರೋರಾತ್ರಿ ಇಲ್ಲಿರುವ ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದವು. ಜನರು ಜೀವ ಉಳಿಸಿಕೊಳ್ಳಲು ಪರದಾಡಿದ ವೇಳೆ ಜಿಲ್ಲಾಡಳಿತ ಜನರನ್ನು ಬೋಟ್ ಮೂಲಕ ಸ್ಥಳಾಂತರಿಸಿ ಸಾಂತ್ವನ ಕೇಂದ್ರದಲ್ಲಿ ಇರಿಸಿತ್ತು.
ಪರಿಹಾರದ ಹಣನೂ ಬಂದಿಲ್ಲ: ಜಿಲ್ಲೆಯ ಹೆಬ್ಬಾಗಿಲು ಕೊಪ್ಪದಲ್ಲಿ ಹರಿಯುವ ಕಾವೇರಿ ಉಕ್ಕಿಹರಿದರೆ ನದಿಪಾತ್ರದಲ್ಲಿರುವ ಮನೆಗಳು ಮುಳುಗಡೆಯಾಗುತ್ತವೆ. ಆಸೆಯಿಂದ ಜನ ಸಾಲ ಮಾಡಿ ಸೈಟು ಖರೀದಿ ಮಾಡಿ, ಮನೆಗಳನ್ನು ಕಟ್ಟಿದ್ದಾರೆ. ಕಳೆದ ಬಾರಿ ಮಳೆ ಬಂದಾಗ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿತ್ತು. ಈಗ ಕೊನೆ ಪಕ್ಷ ಪರಿಹಾರದ ಹಣನೂ ಬಂದಿಲ್ಲ ಎಂದು ಸ್ಥಳೀಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಾಲ ಕಟ್ಟೋದು ಯಾವಾಗ?: ಈಗಾಗಲೇ ನಾವು ಸಾಲ ಮಾಡಿಕೊಂಡಿದ್ದೀವಿ, ಇಗ ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ಅಂದ್ರೆ ನಾವು ಎಲ್ಲಿಗೆ ಹೋಗೋದು?. 6 ತಿಂಗಳು ಮನೆಯಲ್ಲಿ ಇರೋದು, 6 ತಿಂಗಳು ಮನೆ ಬಿಡೋದು ಆಗಿದೆ. ಹೀಗಾದ್ರೆ ನಾವು ಕೆಲಸಮಾಡಿ ಸಾಲ ಕಟ್ಟೋದು ಯಾವಾಗ? ಎಂದು ಸ್ಥಳೀಯರೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೆಆರ್ಎಸ್ ಡ್ಯಾಂ ಜಟಾಪಟಿ: ಸಮಸ್ಯೆಯನ್ನು ವ್ಯಕ್ತಿಗತ ಮಾಡುವುದು ಸರಿಯಲ್ಲ- ನಳಿನ್ ಕುಮಾರ್ ಕಟೀಲ್