ಮಡಿಕೇರಿ: ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ (ಮಡಿಕೇರಿ ಮಾರ್ಗವಾಗಿ) ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಡಿಕೇರಿ ಸಮೀಪದ ಕಾಟಕೇರಿ ಬಳಿ ಕಾಣಿಸಿಕೊಂಡಿರುವ ಬಿರುಕಿನ ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್, ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಘಟನಾ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಕಾಮಗಾರಿ ನಡೆದಿರುವ ಜಾಗದಲ್ಲಿ ಅಷ್ಟೇನು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಕಾಣಿಸಿಕೊಂಡಿಲ್ಲ. ರಸ್ತೆಯಲ್ಲಿ ಸಣ್ಣ ಪ್ರಮಾಣದ ಬಿರುಕಷ್ಟೇ ಕಾಣಿಸಿಕೊಂಡಿದೆ. ಈಗಾಗಲೇ ಕಳೆದ ಬಾರಿ ಭೂ ಕುಸಿತಕ್ಕೊಳಗಾಗಿದ್ದ ರಸ್ತೆಗಳನ್ನು ಪುನರ್ ನಿರ್ಮಿಸಿರುವ ಸ್ಥಳದ ಪಕ್ಕದಲ್ಲಿ ಚೀಲಗಳಿಂದ ನಿರ್ಮಿಸಿರುವ ತಡೆಗೋಡೆ ಸಮೀಪ ನೀರು ನಿಲ್ಲದಂತೆ ಪರ್ಯಾಯ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಎಂಜಿನಿಯರ್ಗೆ ಸೂಚಿಸಿದ್ದೇವೆ. ರಸ್ತೆ ದುರಸ್ತಿ ಮಾಡುತ್ತಿದ್ದಾಗಲೇ ತಡೆಗೋಡೆ ನಿರ್ಮಿಸುವಂತೆ ನಾವು ಹೇಳಿದ್ದರೂ ಆ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ರಸ್ತೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಇದೂ ಒಂದು ಕಾರಣ. ಇದೀಗ ಮಳೆಗಾಲವಾದ್ದರಿಂದ ಆ ಕೆಲಸ ಸಾಧ್ಯವಿಲ್ಲವೆಂದು ಕಾಮಗಾರಿ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಹವಾಮಾನ ಇಲಾಖೆ ರಾಜ್ಯದಲ್ಲಿ ಅದರಲ್ಲೂ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜುಲೈನಿಂದ ಮುಂಗಾರು ಚುರುಕಾಗಲಿದೆ ಎಂದು ಮಾಹಿತಿ ನೀಡಿತ್ತು. ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಪ್ರಯಾಣಿಕರ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಬ್ಯಾರಿಕೇಡ್ ಹಾಕಿದೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಬಿರುಕು ಬಿಟ್ಟಿರುವ ಜಾಗಕ್ಕೆ ತೇಪೆ ಹಾಕಿದೆ ಎಂದು ಶಾಸಕರು ತಿಳಿಸಿದರು.