ಕೊಡಗು: ಮೂರು ವರ್ಷಗಳಲ್ಲಿ 9 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರಾಜ್ಯ ದರೋಡೆ ಕೋರರನ್ನು ಬಂಧಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಡಿ.ಪೆನ್ನೇಕರ್ ಆರೋಪಿಗಳಾದ ಕೊಡ್ಲಿಪೇಟೆ ನಿವಾಸಿ ಸಣ್ಣಪ್ಪ, ಕುಶಾಲ್ ಹಾಗೂ ಬ್ಯಾಂಕ್ ಅಟೆಂಡರ್ ಕೆಲಸ ಮಾಡುತ್ತಿದ್ದ ಗಣೇಶ್‍ನನ್ನು ಬಂಧಿಸಿ 61 ಗ್ರಾಂ ಚಿನ್ನಾಭರಣ ಮತ್ತು 100 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ಬೆಂಗಳೂರು, ಹಾಸನ ಜಿಲ್ಲೆಗಳಲ್ಲಿ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬೆಳಗ್ಗೆ ಸಂಚು ರೂಪಿಸಿ, ರಾತ್ರಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತ ಆರೋಪಿ ಸಣ್ಣಪ್ಪ ಒಟ್ಟು 31 ಪ್ರಕರಣಗಳಲ್ಲಿ ಭಾಗಿಯಾಗಿ 9 ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ್ದು, ಬೆಟ್ಟದಹಳ್ಳಿಯಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸುವಾಗ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.