ಕೊಡಗು: ಜಿಲ್ಲೆಯಲ್ಲಿ ವನ್ಯಮೃಗಗಳ ದಾಳಿ ಮುಂದುರೆದಿದ್ದು, ಆನೆ ಮತ್ತು ಹುಲಿ ದಾಳಿಯ ಮತ್ತೆರಡು ಘಟನೆಗಳು ನಡೆದಿವೆ.
ಜಿಲ್ಲೆಯ ವಿರಾಜಪೇಟೆ ತಾಲೂಕು ಬಿರುಗ ಗ್ರಾಮದ ಮಂದಣ್ಣ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿಯಿಟ್ಟಿದ್ದು, ಸಾವಿರಾರು ರೂ. ಮೌಲ್ಯದ ಕಾಫಿ, ಅಡಿಕೆ ಗಿಡಗಳನ್ನು ತುಳಿದು ನಾಶ ಮಾಡಿವೆ. ಅತಿವೃಷ್ಟಿ-ಅನಾವೃಷ್ಟಿಯಿಂದ ಈಗಾಗಲೇ ಕೃಷಿ ಕಳೆದುಕೊಂಡು ಕಂಗಾಲಾಗಿರುವ ರೈತನ್ನನು ಕಾಡಾನೆ ದಾಳಿ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ.
ಇನ್ನೊಂದೆಡೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹುಲಿಯೊಂದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಡೆದಿದೆ. ನಾಲ್ಕೇರಿ ಗ್ರಾಮದ ಅಜ್ಜಿಕುಟ್ಟೀರ ರಾಜ ಎಂಬವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ತಡರಾತ್ರಿ ಕೊಟ್ಟಿಗೆಗೆ ನುಗ್ಗಿ ಕೊಂದು ಹಾಕಿದೆ.
ಕಳೆದ ಮೂರು ತಿಂಗಳಿಂದ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹುಲಿ ದಾಳಿ ಪ್ರಕರಣಗಳು ನಡೆಯುತ್ತಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.