ಮಡಿಕೇರಿ(ಕೊಡಗು): ಡಿಸಿ ಅನೀಸ್ ಕಣ್ಮಣಿ ಜಾಯ್ ಈ ಹಿಂದೆ ನರ್ಸ್ ಆಗಿದ್ದರಿಂದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ವೈರಲ್ ಆಗಿರುವ ಪ್ರಶಂಸಾತ್ಮಕ ವಿಡಿಯೋ ನನ್ನದಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಹೈದ್ರಾಬಾದ್ ಮೂಲದ ಕಾಮರ್ಸ್ ಫಾಮ್ ಸೇಫ್ ಶಾಪ್ ಕಂಪೆನಿಯೊಂದರ ವಿಡಿಯೋ ಇದಾಗಿದ್ದು, ಅದರಲ್ಲಿ ಕಂಪೆನಿಯ ಮಹಿಳೆಯೊಬ್ಬರಿಗೆ ಸಿಬ್ಬಂದಿ ಹೂಮಳೆ ಸುರಿದು ಸ್ವಾಗತ ಕೋರಿದ್ದಾರೆ. ಇಬ್ಬರ ಹೋಲಿಕೆ ಒಂದೇ ರೀತಿ ಇರುವುದರಿಂದ ಆ ವಿಡಿಯೋದಲ್ಲಿರುವುದು ನಾನಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇದಕ್ಕೂ ಮೊದಲು ಕೇರಳ ರಾಜ್ಯದ ತ್ರಿವೇಂಡ್ರಂನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಐಎಎಸ್ ಉತ್ತೀರ್ಣರಾಗಿ ಕೊಡಗಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಉಲ್ಭಣದ ಬಳಿಕ ಅವರ ಹಿಂದಿನ ವೈದ್ಯಕೀಯ ಸೇವೆಯ ಅನುಭವದ ಆಧಾರದ ಮೇಲೆ ಸೋಂಕನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವ ವಿಡಿಯೋ ಸಂದೇಶಗಳು ವಾಟ್ಸ್ಯಾಪ್ ಹಾಗೂ ಇತರೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದವು.
ಈ ಕುರಿತು ಸ್ಪಷ್ಟನೆ ನೀಡಿರುವ ಅನೀಸ್ ಕಣ್ಮಣಿ ಜಾಯ್ ಇದರಲ್ಲಿರುವ ಕೆಲವೊಂದು ಅಂಶಗಳು ಸತ್ಯವಾಗಿವೆ. 2009 ರಲ್ಲಿ ತ್ರಿವೇಂಡ್ರಂ ನರ್ಸಿಂಗ್ ಕಾಲೇಜಿನಲ್ಲಿ ಓದಿದ್ದೇನೆ. 2012 ರಲ್ಲಿ ಐಎಎಸ್ ಬ್ಯಾಚ್‌ನಲ್ಲಿ 65 ನೇ ರ್ಯಾಂಕ್ ಪಡೆದು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿದ್ದೇನೆ. ಆದರೆ ವಿಡಿಯೋದಲ್ಲಿ ಇರುವುದು ನಾನಲ್ಲ. ವಿಡಿಯೋ ನೋಡಿ ನನಗೂ ಆಶ್ಚರ್ಯವಾಯಿತು ಎಂದು ತಿಳಿಸಿದ್ದಾರೆ.
ನನಗೂ ಇಂತಹ ಹಲವು ಸಂದೇಶಗಳು ಬರುತ್ತಿವೆ. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ನನಗೆ ಜನತೆ ಯಾವುದೇ ಸನ್ಮಾನ ಮಾಡಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.