ವಿರಾಜಪೇಟೆ (ಕೊಡಗು) : ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ನಿವಾಸಿ ಶಿವಕುಮಾರ್ ಆಲಿಯಾಸ್ ಶಿವರಾಜ್ (24) ಬಂಧಿತ ಆರೋಪಿ. ವೃತ್ತಿಯಲ್ಲಿ ಪೈಂಟರ್ ಆಗಿರುವ ಈತ, ಕುಶಾಲನಗರದ ಆಸುಪಾಸಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಅಪ್ರಾಪ್ತೆಯೊಬ್ಬಳ ಪರಿಚಯವಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿ, ಆರೋಪಿ ಶಿವಕುಮಾರ್ ಬಾಲಕಿಗೆ ಉಡುಗೊರೆಗಳನ್ನು ನೀಡಿ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿದ್ದಾನೆ. ಈತ ಮೋಸ ಮಾಡುತ್ತಿದ್ದಾನೆ ಎಂದು ಅರಿವಾದಾಗ, ಪ್ರೀತಿಗೆ ಇತಿಶ್ರಿ ಹೇಳಿ ಆತ ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಲು ಜುಲೈ 31 ರಂದು ಬಾಲಕಿ ಆತನ ಮನೆಗೆ ಹೋಗಿದ್ದಳು. ಈ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಿದ ಶಿವಕುಮಾರ್, ಮೊಬೈಲ್ನಲ್ಲಿ ಚಿತ್ರೀಕರಿಸಿ ಸ್ನೇಹಿತನಿಗೆ ವಿಡಿಯೋ ರವಾನಿಸಿದ್ದ.
ಈ ವಿಷಯ ತಿಳಿದು ಗಾಬರಿಗೊಂಡ ಬಾಲಕಿ, ನಡೆದಿರುವ ವಿಷಯವನ್ನು ತಂದೆಗೆ ತಿಳಿಸಿದ್ದಳು. ಮಗಳು ನೀಡಿದ ಮಾಹಿತಿಯಂತೆ ಬಾಲಕಿಯ ತಂದೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ, ಆರೋಪಿ ಕೇಂದ್ರ ಕಾರಾಗೃಹದಲ್ಲಿದ್ದಾನೆ.