ವಿರಾಜಪೇಟೆ(ಕೊಡಗು) : ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಹೆಗ್ಗಳ ಕೊಟ್ಟೋಳಿ - ವಿರಾಜಪೇಟೆ ಮಾರ್ಗದಲ್ಲಿ ಸಿಹಿ ಗೆಣಸು ಸಾಗಿಸುವ ನೆಪದಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಪತ್ತೆಹಚ್ಚಿ, ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ವಾಹನದಲ್ಲಿ(ಮಹೀಂದ್ರ ಪಿಕಪ್ ಕೆಎಲ್-45–ಎ-1656) ಬೀಟೆ ಮರದ ನಾಟಗಳ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಸಿಹಿ ಗೆಣಸು ತುಂಬಿಸಿ 11 ಬೀಟೆ ನಾಟಗಳು ಕಾಣದಂತೆ ಮುಚ್ಚಿ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ, ವಿರಾಜಪೇಟೆ ಅರಣ್ಯ ವಲಯದ ಸಿಬ್ಬ೦ದಿ ಪತ್ತೆಹಚ್ಚಿ 5 ಲಕ್ಷ ಮೌಲ್ಯದ ಬೀಟೆ ನಾಟಗಳೊಂದಿಗೆ ಓರ್ವನನ್ನು ವಾಹನಸಹಿತ ಬಂಧಿಸಿದ್ದಾರೆ. ಆರೋಪಿಯಾದ ಬೇತು ಗ್ರಾಮದ ವಾಹನ ಚಾಲಕನಾದ ಆರೀಸ್ ಎಂ. ಎ. ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳಾದ ಕೊಟ್ಟಮುಡಿ- ಹೊದವಡ ಗ್ರಾಮದ ಅಬ್ಬಾಸ್ ಕೆ.ಯು. ಹಾಗೂ ನಾಪೋಕ್ಲುವಿನ ಹಳೆ ತಾಲೂಕು ಗ್ರಾಮದ ರಿಜ್ವಾನ್ ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕೊಡಗು ವೃತ್ತದ ಸಂರಕ್ಷಣಾಧಿಕಾರಿಗಳಾದ ಬಿ.ಎನ್.ಎನ್. ಮೂರ್ತಿ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮಬಾಬು ಹಾಗೂ ಚಕ್ರಪಾಣಿ, ವಿರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಇದ್ದರು.
ಇದನ್ನೂ ಓದಿ: ಉಪ್ಪಿನಂಗಡಿ: ಕಲ್ಪಾಜಿ ಮರ ಕಡಿದು ಸಾಗಾಟ ಯತ್ನ, ಮೂವರ ಬಂಧನ