ಮಡಿಕೇರಿ: ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಈಡಾಗಿದ್ದ ಕೊಡಗಿನಲ್ಲಿ ಮತ್ತೆ ಅಪಾಯದ ಕರ್ಮೋಡ ಕಾದಿದ್ಯಾ..? ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿಯೂ ಜಲಸ್ಫೋಟ, ಭೂ ಕುಸಿತ ಆಗುತ್ತಾ ಅನ್ನೋ ಅನುಮಾನ ಸಾಮಾನ್ಯವಾಗಿ ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ.
ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಭೂ ವಿಜ್ಞಾನಿಗಳು ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ 13 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ. ಆ ಸೂಕ್ಷ್ಮ ಪ್ರದೇಶಗಳೆಂದರೆ, ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೊಡ್ಲು, ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ (ಜೋಡುಪಾಲ), 2ನೇ ಮೊಣ್ಣಂಗೇರಿ ಎಂದು ಗುರುತಿಸಲಾಗಿದೆ.
2019ರ ಮಳೆಗಾಲದಲ್ಲೂ ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಾದ ಕೆ.ವಿ. ಮಾರುತಿ , ಸುನಂದನ್ ಬಸು, ಅಮರ್ ಜ್ಯೋತಿ ಅವರು ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.
ಇನ್ನು13 ಕಡೆಗಳಿಗೂ ವಿಶೇಷ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್, ಅಗ್ನಿಶಾಮಕದಳ ಸಿಬ್ಬಂದಿ, ಸ್ಥಳೀಯ ಯುವಕರು, ವಿವಿಧ ಇಲಾಖೆಯ ಅಧಿಕಾರಿಗಳ ಟೀಂಗಳನ್ನ ಒಟ್ಟುಗೂಡಿಸಿ ತಂಡ ರೂಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಕ್ಷಣಾ ಕಾರ್ಯಗಳನ್ನ ಕೈಗೊಳ್ಳಲು ಎನ್ ಡಿ ಆರ್ ಎಫ್ ತಂಡವೂ ಕೂಡ ಬಂದು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವಗೆಗೂ ಮೊಕ್ಕಾಂ ಹೂಡಲಿದೆ. ಈ ಮಧ್ಯೆ ಸರ್ಕಾರ ಒಪ್ಪಿಗೆ ನೀಡಿದರೆ ಅಪಾಯ ಸ್ಥಳಗಳ ಜನರನ್ನ ಸುರಕ್ಷಿತ ಸ್ಥಳಕ್ಕೆ ತಂದು ಮೂರು ತಿಂಗಳ ಮಟ್ಟಿಗೆ ಬಾಡಿಗೆ ನೀಡೋ ಸಾಧ್ಯತೆ ಕೂಡ ಜಿಲ್ಲಾಡಳಿತ ಮುಂದಿದೆ.
ಭೂ ಕುಸಿತದ ಲಕ್ಷಣಗಳು:
ಮನೆಯ ಗೋಡೆಗಳಲ್ಲಿ ದಿಢೀರ್ ಬಿರುಕು ಕಾಣಿಸಿಕೊಳ್ಳಬಹುದು, ರಸ್ತೆ ಬೆಟ್ಟ ಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡು ವಿಸ್ತಾರಗೊಳ್ಳುತ್ತಲೇ ಸಾಗಬಹುದು. ಮರ ಹಾಗೂ ಬೇಲಿ ಬದಿಯಲ್ಲಿ ಸಸ್ಯಗಳು ಅಲುಗಾಡುವ ರೀತಿಯ ಲಕ್ಷಣ ಕಂಡುಬಂದರೆ ಎಚ್ಚರಿಕೆ ತೆಗೆದುಕೊಳ್ಳುವುದು ಒಳಿತು. ಇಂಥ ಸೂಚನೆ ಸಿಕ್ಕರೆ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಭೂವಿಜ್ಞಾನಿಗಳು ಹೇಳಿದ್ದಾರೆ.