ಕೊಡಗು : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾರಂಗಿ ಜಲಾಶಯದಿಂದ ನೀರನ್ನು ಹರಿಬಿಡಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನರು ಹೈರಾಣಾಗಿದ್ದಾರೆ. ಈಗಾಗಲೇ ಕೇಂದ್ರ ಹವಾಮಾನ ಇಲಾಖೆ ವ್ಯಾಪಕ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ರೆಡ್ ಅಲರ್ಟ್ ಘೋಷಿಸಿ ಶಾಲಾ-ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ.
ವಿರಾಜಪೇಟೆ ತಾಲೂಕಿನ ನಾಪೋಕ್ಲು, ಪೊನ್ನಂಪೇಟೆ, ಭಾಗಮಂಡಲ, ತಲಕಾವೇರಿ ಹಾಗೂ ಭ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿಯಲ್ಲಿ ನೀರಿನ ಪ್ರಮಾಣದಲ್ಲೂ ಏರಿಕೆ ಆಗಿದೆ. ಈಗಾಗಲೇ ಆಗಸ್ಟ್‌ನಲ್ಲಿ ಸುರಿದ ಮಳೆಗೆ ನೆಲೆ ಕಳೆದುಕೊಂಡು ಪುನರ್ವಸತಿ ಕೇಂದ್ರಗಳನ್ನು ಸೇರಿ ಮತ್ತೆ ಮೂಲ ನೆಲೆ ಸೇರಿರುವ ಜನರಿಗೆ ಮತ್ತಷ್ಟು ಭೀತಿ ಎದುರಾಗಿದೆ. ಭಾಗಮಂಡಲ-ತಲಕಾವೇರಿ ಸಂಪರ್ಕಿಸುವ ತ್ರಿವೇಣಿ ಸಂಗಮ ಭರ್ತಿ ಆಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ.
ನಿನ್ನೆ ರಾತ್ರಿ ಹಾರಂಗಿ ಜಲಾಶಯದಿಂದ 15000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ಜಲಾಶಯದ ನೀರಿನ ಒಳ ಹರಿವು ಹೆಚ್ಚಾದಲ್ಲಿ ಇನ್ನೂ ಹೆಚ್ಚು ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಅಲ್ಲದೆ ಕಾವೇರಿ ಜಲಾನಯನ ಪ್ರದೇಶಗಳಲ್ಲೂ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕಾವೇರಿ ಹೊಳೆಯಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಕುಶಾಲನಗರ ಸೇರಿದಂತೆ ಕಾವೇರಿ ನದಿ ತಟದಲ್ಲಿರುವ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮನವಿ ಮಾಡಿದ್ದಾರೆ.