ಕೊಡಗು: ಜಿಲ್ಲೆಯಲ್ಲಿ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು, ನದಿಗಳ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ಚುರುಕಾಗಿದ್ದು, ಜಿಲ್ಲೆಯ ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಬಾಳೆಲೆ, ಭಾಗಮಂಡಲ ಹಾಗೂ ತಲಕಾವೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಡಿಕೇರಿ, ಕಾಟಕೇರಿ, ಅಪ್ಪಂಗಳ, ತಾಳತ್ತಮನೆ, ಜೋಡುಪಾಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಬಿರುಗಾಳಿಗೆ ಎಮ್ಮೆಮಾಡು ಗ್ರಾಮದ ನಿಲಜಿ ಜಂಕ್ಷನ್ ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದು, ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹಾಗೆಯೇ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಂಗಾಲ ಗ್ರಾಮದಲ್ಲಿ ಗುಡ್ಡ ಕುಸಿದು ಗ್ರಾಮದ ಉತ್ತಯ್ಯ ಎಂಬುವರ ಮನೆಗೆ ಹಾನಿಯಾಗಿದೆ.
ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ನಿನ್ನೆ ಇಡೀ ರಾತ್ರಿ ಉತ್ತಮ ಮಳೆಯಾದ್ದರಿಂದ ತ್ರಿವೇಣಿ ಸಂಗಮ ಭಾಗಮಂಡಲದಲ್ಲೂ ನೀರಿನ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.