ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪ, ನಾಪೋಕ್ಲು, ಮುರ್ನಾಡು, ಸುಂಟಿಕೊಪ್ಪ, ಕುಶಾಲನಗರ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ನದಿಗಳು ತುಂಬಿಹರಿಯುತ್ತಿವೆ.
ಬ್ರಹ್ಮಗಿರಿ ಬೆಟ್ಟಭಾಗದಲ್ಲಿ ನಿರಂತರ ಮಳೆಯಾಗುತ್ತಿರೋದ್ರಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಮಡಿಕೇರಿಯ ಹೃದಯ ಭಾಗದಲ್ಲಿ ಇರುವಂತಹ ಹಳೆ ಖಾಸಗಿ ಬಸ್ ನಿಲ್ದಾಣದ ಮೇಲ್ಭಾಗದ ಮಣ್ಣು ಕುಸಿದಿದೆ. ಅಲ್ಲದೆ ಭಾರಿ ಗಾಳಿ-ಮಳೆಯಿಂದಾಗಿ, ಮಾದಾಪುರ, ಮದೆನಾಡು, ಮಾಯಮುಡಿ ಭಾಗದಲ್ಲಿ ಮರಗಳು ಧರೆಗುರುಳಿವೆ.
ಗ್ರಾಮೀಣ ಭಾಗದಲ್ಲೂ ಸಾಕಷ್ಟು ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿ ಕೆಲ ಗ್ರಾಮಗಳು ಕಗ್ಗತ್ತಲಲ್ಲಿರುವ ಪರಿಸ್ಥಿತಿ ಎದುರಾಗಿದೆ. ಜೂನ್ 23 ರಿಂದ ಆಗಸ್ಟ್ 16ರ ವರೆಗೆ ಭಾರಿ ಗಾತ್ರದ ವಾಹನ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದೆ.