ಕೊಡಗು (ತಲಕಾವೇರಿ): ಇಂದು ಸಾಯಂಕಾಲದೊಳಗೆ ದೊರೆತಿರುವ ಇಬ್ಬರ ಮೃತದೇಹಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಭಾಗಮಂಡಲ ಸಮೀಪದ ಮೈಯೂರ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕಳೆದ ಐದಾರು ದಿನದಿಂದ ಕಾರ್ಯಾಚರಣೆ ನಡೆಯುತ್ತಿರುವ ಜಾಗದಲ್ಲಿಯೇ ಮೊಕ್ಕಾಂ ಹೂಡಿದ್ದೇವೆ. ಘಟನೆಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದೇವೆ. ದುರ್ಘಟನೆ ನಡೆದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ನಾಗತೀರ್ಥದಲ್ಲಿ ನಾರಾಯಣ ಆಚಾರ್ ಮೃತದೇಹ ಪತ್ತೆಯಾಗಿದೆ. ಅಲ್ಲೇ ಉಳಿದ ಮೃತದೇಹಗಳು ಇರಬಹುದು ಅಂತ ಹುಡುಕಿದೆವು. ಸಾಯಂಕಾಲದೊಳಗೆ ದೊರೆತಿರುವ ಇಬ್ಬರ ಮೃತದೇಹಗಳಿಗೆ ಅಂತಿಮ ಸಂಸ್ಕಾರ ನೆರವೇರಿಸುತ್ತೇವೆ ಎಂದರು.
ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಸಿದ್ದೇವೆ. ನಾಳೆಯೂ ಕಾರ್ಯಾಚರಣೆಯನ್ನು ಮುಂದುವರೆಸುತ್ತೇವೆ. ಈ ಬಗ್ಗೆ ಸಿಎಂ ಅವರಿಗೂ ವಿಷಯ ಮುಟ್ಟಿಸಿದ್ಧೇನೆ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾರಾಯಣ ಆಚಾರ್ ಶವ ಸಿಕ್ಕ ಕಡೆ ಸೀರೆ ಸಿಕ್ಕಿದೆ. ಒಂದಷ್ಟು ಹಾಸಿಗೆ, ವಸ್ತುಗಳು ದೊರೆತಿವೆ. ಶವ ಸಿಕ್ಕ ಜಾಗಕ್ಕೂ ಘಟನಾ ಸ್ಥಳಕ್ಕೂ ಸುಮಾರು 2 ಕಿಲೋ ಮೀಟರ್ ಆಗುತ್ತದೆ. ಒಂದು ವೇಳೆ ಮೃತದೇಹ ಕೊಚ್ಚಿ ಹೋದರೆ ಭಾಗಮಂಡಲದ ಬಳಿ ಸಿಗಬಹುದು. ಶವಗಳು ಕಿ.ಮೀ ಗಟ್ಟಲೆ ಕೊಚ್ಚಿ ಹೋದ ಉದಾಹರಣೆ ಕಡಿಮೆ ಎಂದು ತಿಳಿಸಿದರು
ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಪರಿಣತಿ ಇದೆ. ಅವರು ಹುಡುಕುತ್ತಾರೆ. ಅವರಿಗೆ ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು ಸಹಾಯ ಮಾಡ್ತಾರೆ ಎಂದರು.