ಮಡಿಕೇರಿ/ಕೊಡಗು: ಬರೆ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಚಾಮುಂಡೇಶ್ವರಿ ನಗರದ 5 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು ಬುಧವಾರ ರಾತ್ರಿ ಚಾಮುಂಡೇಶ್ವರಿ ಬಡಾವಣೆ ನಿವಾಸಿ ಶ್ಯಾಮ್ ಸುಂದರ್ ಎಂಬುವವರ ಮನೆಯ ಹಿಂದೆ ಗುಡ್ಡ ಕುಸಿಯುತ್ತಿರುವುದರಿಂದ ಅತೀ ಸೂಕ್ಷ್ಮ ಪ್ರದೇಶದಲ್ಲಿರುವ 5 ಕುಟುಂಬಗಳನ್ನು ಗಾಳಿಬೀಡು ಸಮೀಪದ ನವೋದಯ ಶಾಲೆಗೆ ಸ್ಥಳಾಂತರಿಸಲಾಯಿತು.
ಇನ್ನು ಮಳೆ ಜಿನುಗುತ್ತಿರುವುದರಿಂದ ಮಣ್ಣು ತೇವವಾಗಿ ಯಾವಾಗ ಬೇಕಾದರೂ ಜಾರುವ ಪರಿಸ್ಥಿತಿ ಎದುರಾಗುವ ಭೀತಿ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಅನನ್ಯ ವಾಸುದೇವ್ ಅವರ ಸೂಚನೆಯಂತೆ ಎನ್‌ಡಿಆರ್‌ಎಫ್ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಿವಾಸಿಗಳಿಗೆ ತಿಳಿಸಲು ಯತ್ನಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿಗಳ ನಿಯಂತ್ರಣ ಕೊಠಡಿಗೆ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭೂ ಕುಸಿತ ಉಂಟಾದ ಬಗ್ಗೆ ಮಾಹಿತಿ ಬಂದಿದ್ದು, ಪರಿಹಾರ ಕಾರ್ಯಾಚರಣೆ ತಂಡವು ಭೇಟಿ ನೀಡಿ ಪರಿಶೀಲಿಸಿರುತ್ತದೆ. ಇದೊಂದು ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, 05 ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಇನ್ನು ಪರಿಹಾರ ಕಾರ್ಯಾಚರಣೆ ತಂಡವು ಹತ್ತಿರದಲ್ಲೇ ಬೀಡು ಬಿಟ್ಟಿದ್ದು, ಯಾವುದೇ ಆತಂಕ ಪಡುವ ಅಗತ್ಯ ಇರುವುದಿಲ್ಲ ಎಂದು ಜಿಲ್ಲಾಡಳಿತ ಅಭಯ ನೀಡಿದೆ.