ಕೊಡಗು : ಕೊಡವ ಹಾಗೂ ಜಮ್ಮಾ ಹಿಡುವಳಿದಾರರು ಹಿಂದಿನಿಂದ ಪಾರಂಪರಿಕವಾಗಿ ಹೊಂದಿರುವ ಕೋವಿಯ ಪರವಾನಗಿ ವಿನಾಯಿತಿ ಹಕ್ಕನ್ನು 10 ವರ್ಷಕ್ಕೆ ಸೀಮಿತ ಮಾಡಿ ಕೇಂದ್ರ ಆದೇಶ ಹೊರಡಿಸಿರುವುದು ಆತಂಕ ಸೃಷ್ಟಿಸಿತ್ತು. ಕೆಲವರು ಬಂದೂಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಇತ್ತೀಚಿಗೆ ಕೇಳಿ ಬಂದಿದ್ದವು.
2015 ರಲ್ಲಿ ಜಾತಿ ಆಧಾರದ ಮೇಲೆ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿದಾರರಿಗೆ ಒದಗಿಸಿದ್ದ ಬಂದೂಕು ಪರವಾನಗಿ ವಿನಾಯಿತಿ ವಿಶೇಷ ಹಕ್ಕನ್ನು ಹೈಕೋರ್ಟ್‌ನಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಯಾಲದಾಳು ಚೇತನ್ ಕೇಶವಾನಂದ ಪ್ರಶ್ನಿಸಿದ್ದರು. ಈ ಸಂಬಂಧ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಜಿಲ್ಲಾಡಳಿತದ ಮೂಲಕ ವರದಿ ಪಡೆದ ರಾಜ್ಯ ಸರ್ಕಾರ, ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಇದೀಗ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ದಾಸ್ ಹೊರಡಿಸಿರುವ ಆದೇಶದಲ್ಲಿ 2029 ರ ಅಕ್ಟೋಬರ್ 31ರವರೆಗೆ ಕೋವಿ ಪರವಾನಗಿ ವಿನಾಯಿತಿ ಹಕ್ಕನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಕೊಡವರು ಬಂದೂಕು ಹೊಂದುವ ವಿಶೇಷ ಅಧಿಕಾರವನ್ನು 1861 ರಲ್ಲಿ ಬ್ರಿಟಿಷರ ಕಾಲದಲ್ಲಿ ಅಧಿಕೃತವಾಗಿ ನೀಡಲಾಗಿತ್ತು. ಕೂರ್ಗ್ ಚೀಫ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಕೊಡವರಿಗೆ ಹಾಗೂ ಜಮ್ಮಾ ಹಿಡುವವಳಿದಾರರಿಗೆ ವಿಶೇಷ ವಿನಾಯಿತಿ ಹಕ್ಕಿನ ಆದೇಶ ಹೊರಡಿಸಿದ್ದರು. ರಾಜರ ಆಳ್ವಿಕೆಗೂ ಮೊದಲೇ ಕೊಡವರು ಕೋವಿ ಹೊಂದಿದ್ದರು. ಬ್ರಿಟಿಷ್ ಸೇನೆಯಲ್ಲಿ ಕೊಡವರು ನಿಷ್ಠೆ, ಬದ್ಧತೆಯಿಂದ ತಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸಿದ್ದರಿಂದ ಕೋವಿ ಇಟ್ಟುಕೊಳ್ಳಲು ಇದ್ದ ಕಾನೂನು ನಿಯಂತ್ರಣದಿಂದ ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ವಿನಾಯಿತಿ ನೀಡಿದ್ದರು. ಸ್ವಾತಂತ್ರ್ಯ ಬಳಿಕ 1959ರ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3 ಮತ್ತು 4ರ ಅನ್ವಯ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲು ಇರುವ ಪರವಾನಗಿ ವಿನಾಯಿತಿ ಮುಂದುವರಿಸಲು 1963 ರಲ್ಲಿ ಕೇಂದ್ರ ಸರ್ಕಾರ ವಿಶೇಷ ಆದೇಶ ಹೊರಡಿಸಿತ್ತು. ಕೋವಿ ಹೊಂದಲು ಕಾನೂನಿನಡಿ ಪರವಾನಗಿ ಪಡೆಯುವುದರಲ್ಲಿ ಕೊಡವರು, ಕೊಡವ, ಗೌಡ, ಕೊಡವ ಮಾಪಿಳ್ಳೆ, ಹೆಗಡೆ, ಅಮ್ಮ ಕೊಡವ ಸೇರಿದಂತೆ ವಿವಿಧ ಜನಾಂಗದವರು ಜಮ್ಮಾ ಹಿಡುವಳಿದಾರರು ಇದ್ದಾರೆ. ಜಿಲ್ಲಾಡಳಿತದಿಂದ ವಿನಾಯಿತಿ ಪತ್ರ ನೀಡಲಾಗುತ್ತದೆ. ವಿನಾಯಿತಿ ಪತ್ರದಡಿ ತಾವು ಹೊಂದುವ ಕೋವಿಯನ್ನು ದೇಶಾದ್ಯಂತ ತೆಗೆದುಕೊಂಡು ಹೋಗಲು ಮುಕ್ತ ಅವಕಾಶವಿದೆ ಎನ್ನುವುದು ಕೊಡವರ ಅಭಿಪ್ರಾಯ.