ಕೊಡಗು: ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಗೆ ಗಿಫ್ಟ್ ನೀಡುವ ಭರವಸೆ ನೀಡಿತ್ತು. ಆದರೆ ಜನರು ಬಿಜೆಪಿಯನ್ನು ಸೋಲಿಸಿ ಪ್ರಧಾನಿಗೆ ದೊಡ್ಡ ಗಿಫ್ಟ್ ನೀಡಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಮತ್ತು ಪ್ರಧಾನಿ ಮೋದಿ ಅವರ ಮೈಸೂರು ಭೇಟಿಯನ್ನು ಟೀಕಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ವಿರೋಧಿಸಿದ್ದಾರೆ.
ಪ್ರಧಾನಿ ಮೋದಿಯವರು ವಿಶ್ವ ಯೋಗ ದಿನದ ಪ್ರಯುಕ್ತ ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಗೆ ಗಿಫ್ಟ್ ನೀಡಲು ನಿರ್ಧರಿಸಿತ್ತು. ಆದ್ರೆ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಮೊದಲ ಬಾರಿಗೆ ಗೆದ್ದು ಮೋದಿಗೆ ಗಿಫ್ಟ್ ನೀಡಿದ್ದಾರೆ ಎಂದು ಮಡಿಕೇರಿಯಲ್ಲಿ ಧ್ರುವನಾರಯಣ್ ಹೇಳಿದ್ದಾರೆ.
ಅಗ್ನಿಪಥ್ ಯೋಜನೆಗೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದನ್ನು ಜಾರಿ ಮಾಡುವ ಮೂಲಕ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸಲು ಬಿಜೆಪಿ ಹೊಂಚುಹಾಕಿದೆ. ಅಗ್ನಿಪಥ್ ಜಾರಿಗೆ ತರುವ ಮುನ್ನ ಸರ್ವಪಕ್ಷ ಸಭೆ ಕರೆದು, ಯೋಜನೆಯ ಆಗುಹೋಗುಗಳ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಅವರು ಯೋಜನೆಯ ಕುರಿತು ಯಾವ ಸಭೆಯನ್ನು ಕರೆದಿಲ್ಲ. ಭಾರತದ ಸೇನೆ ಪ್ರಪಂಚದಲ್ಲೇ ಹೆಸರುವಾಸಿಯಾಗಿದೆ. ಆದರೇ ಅಗ್ನಿಪಥ್ ನಂತಹ ಯೋಜನೆಯ ಮೂಲಕ ಬಿಜೆಪಿ ಯುವಜನರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ. ಇದರಿಂದ ಯುವಕರು ಮತ್ತಷ್ಟು ನಿರುದ್ಯೋಗಿಗಳಾಗುತ್ತಾರೆ ಎಂದು ಧ್ರುವ ನಾರಾಯಣ್ ಆರೋಪಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಟೀಕೆ: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಿರುವುದನ್ನು ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಟೀಕಿಸಿದ್ದು, ಮೋದಿ ಪಕ್ಷ ರಾಜ್ಯಕ್ಕೆ ಬೆಂಕಿ ಹಚ್ಚಲು, ಮುಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿತು. ಇಂದು ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ತೈಲ ಬರುವುದು ಅರಬ್ ರಾಷ್ಟ್ರಗಳಿಂದಲೇ. ಆದರೆ ಪ್ರವಾದಿ ಅವರನ್ನು ಟೀಕಿಸಿ ಭಾರತದೊಂದಿಗಿನ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹಾಳು ಮಾಡಲಾಗಿದೆ. ಅವೆಲ್ಲವನ್ನು ಮುಚ್ಚಿ ಹಾಕಲು ಈಗ ಇ.ಡಿ. ಅಸ್ತ್ರವನ್ನು ದುರುಪಯೋಗ ಪಡಿಸಿಕೊಂಡು ರಾಹುಲ್ ಗಾಂಧಿ ಅವರನ್ನು ತನಿಖೆ ಮಾಡಲಾಗುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯ ಮತ ಇಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಂಡರೆ ಬಿಜೆಪಿಗೆ ಭಯ. ಅದಕ್ಕೆ ಇಡಿ ಬಿಟ್ಟು ಕಾಂಗ್ರೆಸನ್ನು ಭಯಪಡಿಸಲು ಯತ್ನಿಸುತ್ತಿದೆ. ಅದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ. ಅಗ್ನಿಪಥ್ ಯೋಜನೆ ವಿರುದ್ಧ ದೇಶದ ಜನ ದಂಗೆ ಎದ್ದಿದ್ದಾರೆ. ಇದಕ್ಕೆಲ್ಲಾ ಕೇಂದ್ರದ ಆಡಳಿತ ಪಕ್ಷದ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಮಡಿಕೇರಿಯಲ್ಲಿ ಕೈ ನಾಯಕ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ರಾಜಧಾನಿಗೆ ಆಗಮಿಸಿದ ಪ್ರಧಾನಿ ಮೋದಿ: 33 ಸಾವಿರ ಕೋಟಿ ರೂ.ಯೋಜನೆಗಳಿಗೆ ಚಾಲನೆ