ಮಡಿಕೇರಿ: ಜಿಲ್ಲೆಯ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಮೆರವಣಿಗೆಗೆ ಭರದ ಸಿದ್ಧತೆ ನಡೆದಿದೆ. ನಗರದ ನಾಲ್ಕು ಶಕ್ತಿದೇವತೆಗಳೂ ಸೇರಿದಂತೆ ವಿವಿಧ ದೇವಾಲಯಗಳ 10 ವೈವಿಧ್ಯಮಯ ಬೃಹತ್ ಸ್ತಬ್ಧಚಿತ್ರಗಳು ತಯಾರಾಗಿವೆ. ರಾತ್ರಿ ಧ್ವನಿ, ಬೆಳಕಿನ ಚಿತ್ತಾರದ ಪ್ರದರ್ಶನ ಆರಂಭವಾಗಿದೆ.
ಮಡಿಕೇರಿ ದಸರಾ ಎಂದರೆ ಇಲ್ಲಿನ ದಶಮಂಟಪಗಳ ಬೃಹತ್ ಮೆರವಣಿಗೆ, ರಾತ್ರಿಯಿಡೀ ನಡೆಯುವ ಮೈನವಿರೇಳಿಸುವ ಸ್ತಬ್ಧಚಿತ್ರಗಳ ಪ್ರದರ್ಶನ, ದೇವಾನುದೇವತೆಗಳ ಪುರಾಣವನ್ನು ತೆರೆದಿಡುವ ದಶಮಂಟಪಗಳ ಚಿತ್ತಾರ ವಿಶೇಷವಾಗಿರುತ್ತದೆ. ಮುಖ್ಯವಾಗಿ, ಮೈಸೂರು ದಸರಾದ ಜಂಬೂಸವಾರಿಯಂತೆ ಮಡಿಕೇರಿ ದಸರಾದಲ್ಲಿ ದಶಮಂಟಪಗಳ ಮೆರವಣಿಗೆ ಪ್ರಾಮುಖ್ಯತೆ ಪಡೆದಿದೆ.
ಮಂಗಳಾವರ ನಗರದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಸರ್ಕಾರಿ ಕಟ್ಟಡ, ವೃತ್ತಗಳಲ್ಲಿ ನಗರಸಭೆಯಿಂದ ವರ್ಣರಂಜಿತ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ ಪ್ರವೇಶಿಸುತ್ತಿದ್ದಂತೆ ಲೈಟಿಂಗ್ಸ್ ಜನರನ್ನು ಸ್ವಾಗತಿಸುತ್ತಿವೆ.
ಇಂದು ರಾತ್ರಿಯ ಶೋಭಾಯಾತ್ರೆಗಾಗಿ ನಗರದ ನಾಲ್ಕು ಶಕ್ತಿದೇವತೆಗಳು ಸೇರಿದಂತೆ 10 ದೇವಾಲಯಗಳ ದಶಮಂಟಪ ತಯಾರಿಕಾರ್ಯ ಭರದಿಂದ ಸಾಗಿತ್ತು. ವೈವಿಧ್ಯಮಯ ದಶಮಂಟಪ ಉತ್ಸವ ಆರಂಭವಾಗಿದ್ದು, ಒಂದೊಂದು ಮಂಟಪಗಳಿಗೂ ಭಾರಿ ಮೊತ್ತದ ಹಣ ಖರ್ಚು ಮಾಡಲಾಗಿದೆ. ಎರಡೆರಡು ಟ್ಯಾಕ್ಟರ್ಗಳನ್ನು ಬಳಸಿ ಬೃಹತ್ ಸ್ತಬ್ಧಚಿತ್ರಗಳನ್ನು ಸಿದ್ಧಗೊಳಿಸಲಾಗಿದೆ.
ಮಹಾಗಣಪತಿಯಿಂದ ಶತಮಹಿಷಿಯ ಸಂಹಾರ, ವೈಕುಂಠ ದರ್ಶನ, ಮಣಿಕಂಟನಿಂದ ಮಹಿಷಿಯ ಶಾಪ ವಿಮೋಚನೆ, ಶಿವನಿಂದ ತ್ರಿಪುರಾಸುರನ ಸಂಹಾರ, ಮಹಾದೇವನಿಂದ ಜಲಂಧರನ ವಧೆ, ಕದಂಬ ಕೌಶಿಕೆ ಈ ರೀತಿಯ ಪುರಾಣದ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಸ್ತಬ್ಧಚಿತ್ರ ಪ್ರದರ್ಶನ ನಡೆಯಲಿದೆ. ಲಕ್ಷಾಂತರ ಜನರು ನಗರದ ವಿವಿಧೆಡೆ ದಶಮಂಟಪಗಳ ಪ್ರದರ್ಶನ ವೀಕ್ಷಣೆ ಮಾಡಲಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ: ಜಗತ್ಪ್ರಸಿದ್ಧ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ, ಡಿಸಿಎಂ