ಕೊಡಗು: ಹಸುವಿಗೆ ಗುಂಡಿಕ್ಕಿ ಕೊಂದು ಮಾಂಸ ತೆಗೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ದಾಳಿ ಮಾಡಿದ್ದು, ಸ್ಥಳೀಯರಿಗೆ ಬಂದೂಕಿನಿಂದ ಬೆದರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ ಹಸುವನ್ನು ಮೇಯಲು ಬಿಡಲಾಗಿತ್ತು. ಸಂಜೆ ಆದ್ರೂ ಹಸು ಮನೆಗೆ ಬಂದಿಲ್ಲ. ಆಗ ಸಂಶಯಗೊಂಡು ಮನೆಯವರು ಹೋಗಿ ನೋಡಿದಾಗ ರಕ್ತದ ಕಲೆಗಳು ಪತ್ತೆಯಾಗಿತ್ತು. ನಂತರ ಸ್ಥಳೀಯರು ಮತ್ತು 50 ಕ್ಕೂ ಹೆಚ್ಚು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಒಟ್ಟು ಸೇರಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಸಂಜೆ 7 ಗಂಟೆಗೆ ವೇಳೆಗೆ ಕಾಡಿನ ಮಧ್ಯೆ ದುಷ್ಕರ್ಮಿಗಳು ಮಾಂಸ ತೆಗೆಯುತ್ತಿದ್ದುದನ್ನು ಸ್ಥಳೀಯರು ಪತ್ತೆ ಹಚ್ಚಿ ದಾಳಿ ಮಾಡಿದ್ದಾರೆ.
ಈ ವೇಳೆ ದುಷ್ಕರ್ಮಿಗಳ ಮುಂಚೂಣಿ ತಂಡದ ಕಾರ್ಯಕರ್ತನೊಬ್ಬ ಸ್ಥಳೀಯರ ಎದೆಗೆ ಕೋವಿಯಿಟ್ಟು ಬೆದರಿಸಿ, ಕತ್ತಲಲ್ಲಿ ಎಲ್ಲರೂ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರ ಬಂದು ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಗೋಮಾಂಸ ಮತ್ತು ಚಾಕು ವಶಪಡಿಸಿಕೊಂಡಿದ್ದಾರೆ. ಕಗ್ಗೋಡ್ಲು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
ಕೊಡಗಿನಲ್ಲಿ ದಿನನಿತ್ಯವೂ ಗೋಹತ್ಯೆ ನಡೆಯುತ್ತಿದೆ. ಕಳೆದ ವಾರವಷ್ಟೆ ಕಗ್ಗೋಡ್ಲುವಿನಲ್ಲಿ ರೈತರ ಗೋವಿಗೆ ಗುಂಡಿಕ್ಕಿ ಮಾಂಸ ಮಾಡಿ ದುಷ್ಕರ್ಮಿಗಳು ಕೊಂಡೊಯ್ದಿದ್ದರು. ಇದೀಗ ಮತ್ತೊಂದು ಪ್ರಕರಣ ನಡೆದಿದೆ. ಗೋಹತ್ಯೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ಟೌವ್ ಮೇಲಿದ್ದ ಬಿಸಿ ಸಾಂಬಾರು ಮೈಮೇಲೆ ಬಿದ್ದು ಮಗು ಸಾವು