ಕೊಡಗು : ಜಿಲ್ಲೆಯ ಮಾದಾಪುರ ಬಳಿಯ ಕುಂಬೂರು ಗ್ರಾಮದ ಮನೆಯಲ್ಲಿ ಕೋವಿಡ್ ರೋಗಿಯೊಬ್ಬರು ಕುಳಿತ ಸ್ಥಿತಿಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಗ್ರಾಮದ ಸುಬ್ಬಯ್ಯ (67) ಮೃತ ವ್ಯಕ್ತಿ. ಕೋವಿಡ್ ಸೋಂಕಿತರಾಗಿದ್ದ ಇವರು, ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಶಂಕೆ ವ್ಯಕ್ತವಾಗಿದೆ.
ಒಬ್ಬಂಟಿಯಾಗಿ ಜೀವಿಸುತ್ತಿದ್ದ ಸುಬ್ಬಯ್ಯ ಅವರು ಕೋವಿಡ್ ಸೋಂಕು ತಗುಲಿದ್ದರಿಂದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಆದರೆ, ಮೂರು ದಿನಗಳಿಂದ ಸುಬ್ಬಯ್ಯ ಮನೆಯ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಸಂಶಯಗೊಂಡು ನಿನ್ನೆ ರಾತ್ರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮಾಹಿತಿ ನೀಡಿದ್ದರು.
ಓದಿ : ಮೈಸೂರು ಜಿ.ಪಂ. ಮಾಜಿ ಅಧ್ಯಕ್ಷನ ಪುತ್ರ ನೇಣಿಗೆ ಶರಣು
ಇಂದು ಬೆಳಗ್ಗೆ ಶಾಸಕರು ಮತ್ತು ಅಧಿಕಾರಿಗಳು ಬಂದು ಪಿಪಿಇ ಕಿಟ್ ಧರಿಸಿ ಮನೆ ತೆರಳಿ ಬಾಗಿಲು ತೆರೆದು ನೋಡಿದಾಗ ಕುರ್ಚಿಯಲ್ಲಿ ಕುಳಿತಿದ್ದ ಸ್ಥಿತಿಯಲ್ಲಿ ಸುಬ್ಬಯ್ಯ ಮೃತಪಟ್ಟಿರುವುದು ಗೊತ್ತಾಗಿದೆ. ಸುಬ್ಬಯ್ಯ ಮೃತಪಟ್ಟು ಎಷ್ಟು ದಿನಗಳಾಗಿವೆ ಎಂಬ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.