ಮಡಿಕೇರಿ: ಸಭಾಧ್ಯಕ್ಷರ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಹಸ್ತಕ್ಷೇಪ ಅಡ್ಡಿಯಾಗುತ್ತಿವೆ ಎಂದು ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ವಿರಾಜಪೇಟೆ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ಅಗತ್ಯ ಕ್ರಮಗಳನ್ನು ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ನಿಮಗೆ ಜಿಲ್ಲೆಯ ಸಚಿವ ಸ್ಥಾನ ಸಿಗಲಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಹುಶಃ ಸಭಾಧ್ಯಕ್ಷರ ಹುದ್ದೆ ಹೇಗಿದೆ ಎಂಬುದು ನನಗೆ ಗೊತ್ತಿದೆ. ಆ ಹುದ್ದೆಗೆ ಬಿಜೆಪಿಯಿಂದ ನಾನೂ ಆಕಾಂಕ್ಷಿ ಆಗಿದ್ದು ಸತ್ಯ. ಆದರೆ ಸಭಾಧ್ಯಕ್ಷರ ಕಾರ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ಕರ್ತವ್ಯ ನಿರ್ವಹಿಸುವುದಾದರೂ ಹೇಗೆ ಎಂಬ ಗೊಂದಲ ಉಂಟಾಗುತ್ತದೆ ಎಂದರು.
ಸಭಾಧ್ಯಕ್ಷ ಸ್ಥಾನಕ್ಕೆ ನಾನು ಹಿಂದೇಟು ಹಾಕಿದ್ದು ನಿಜ. ಅದಕ್ಕೆ ಕಾರಣ ಸಭಾಧ್ಯಕ್ಷರ ಕಾರ್ಯದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುತ್ತಿರುವುದು. ಸಚಿವ ಸ್ಥಾನದ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅದೆಲ್ಲ ಸಿಎಂ ಅವರಿಗೆ ಬಿಟ್ಟ ವಿಚಾರ. ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರೇ ದಿನಗಳಲ್ಲಿ ಟಿಪ್ಪು ಜಯಂತಿ ರದ್ದು ಮಾಡುತ್ತೇವೆ ಎಂದಿದ್ದೆವು. ಅದರಂತೆ ನಡೆದುಕೊಂಡಿದ್ದೇವೆ. ಹಾಗೆಯೇ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ದಾಖಲಿಸಿದ್ದ ಪ್ರಕರಣಗಳನ್ನೂ ವಾಪಸ್ ಪಡೆಯುತ್ತೇವೆ ಎಂದು ಬೋಪಯ್ಯ ಹೇಳಿದ್ರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಕಲಂ 370 ಹಾಗೂ ಅದಕ್ಕೆ ಹೊಂದಿಕೊಂಡಿದ್ದ 35(A) ವಿಧಿಯ ರದ್ದತಿ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇನ್ನೆರಡು ದಿನಗಳಲ್ಲಿ ಲೋಕಸಭೆಯಲ್ಲೂ ಈ ವಿಧೇಯಕ ಅಂಗೀಕಾರವಾಗಲಿದೆ. ಮುಂದಿನ ದಿನಗಳಲ್ಲಿ ಜಮ್ಮ-ಕಾಶ್ಮೀರ ದೇಶದ ಒಂದು ಅವಿಭಾಜ್ಯ ಅಂಗವಾಗಲಿದೆ ಎಂದರು.
ಇನ್ನು ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೀಡಾಗಿದ್ದ ರಸ್ತೆ ಹಾಗೂ ಇನ್ನಿತರೆ ಕೆಲಸಗಳಿಗೆ 535 ಕೋಟಿ ಅನುದಾನ ಕೊಡುವಂತೆ ಕೇಳಿದ್ದೆವು. ಅದಕ್ಕೆ ಸರ್ಕಾರವೂ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ. ಇತ್ತೀಚೆಗೆ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಹ ಎಚ್ಚರಿಕೆ ವಹಿಸಬೇಕು ಎಂದು ಬೋಪಯ್ಯ ಸಲಹೆ ನೀಡಿದರು.