ಕೊಡಗು: ಕೊರೊನಾ ಸೋಂಕಿತನ ಹೆಸರನ್ನು ಸರ್ಕಾರ ಬಹಿರಂಗ ಮಾಡುವುದಿಲ್ಲ. ಆದರೆ ಹೊರ ದೇಶದಿಂದ ಕೊಡಗಿಗೆ ಬಂದ ಸೋಂಕಿತನ ಹೆಸರನ್ನು ಅಧಿಕಾರಿಗಳೇ ಬಹಿರಂಗಗೊಳಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಮಡಿಕೇರಿ ತಾಲೂಕಿನ ನಾಪೋಕ್ಲಿಗೆ ಬಂದಿದ್ದಾರೆ. ಆದರೆ ನಾಪೋಕ್ಲಿನ ತಮ್ಮ ಮನೆಯಲ್ಲಿರಬೇಕಾದ ವ್ಯಕ್ತಿ ವಿರಾಜಪೇಟೆ ಪಟ್ಟಣದ ಮೀನುಪೇಟೆಯಲ್ಲಿ ಇದ್ದಾರೆ. ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ವ್ಯಕ್ತಿಗೆ ಪಾಸಿಟಿವ್ ಬಂದಿದೆ.
ಇದರಿಂದ ವಿರಾಜಪೇಟೆ ಪಟ್ಟಣದ ಮೀನುಪೇಟೆಯನ್ನು ನಿಷೇಧಿತ ಪ್ರದೇಶವೆಂದು ಮಾಡಿದ್ದಾರೆ. ಜೊತೆಗೆ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡುವಾಗ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿಯ ಸ್ನೇಹಿತರು, ಸಂಬಂಧಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಅವರನ್ನು ಕೇಳಿದರೆ, ಹೆಸರು ಬಹಿರಂಗ ಪಡಿಸಬಾರದಿತ್ತು. ಇದು ಸ್ಥಳೀಯ ಆಡಳಿತದಿಂದ ತಪ್ಪಾಗಿದೆ. ಇನ್ಮುಂದೆ ಇಂತಹ ತಪ್ಪಾಗದಂತೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವುದಕ್ಕೆ ಶಿಕ್ಷೆಯೂ ಆಗಲಿದೆ ಎಂದರು.
ಇನ್ನು ಸೋಂಕಿತ ವ್ಯಕ್ತಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ಮಡಿಕೇರಿ ತಾಲೂಕಿನ ನಾಪೋಕ್ಲಿನ ಅಡ್ರೆಸ್ ಕೊಟ್ಟಿದ್ದಾರೆ. ಬಳಿಕ ವಿರಾಜಪೇಟೆ ಪಟ್ಟಣಕ್ಕೆ ಬಂದು ನೆಲೆಸಿ ತಪ್ಪು ಮಾಡಿದ್ದಾರೆ. ಇಂತವರಿಂದಾಗಿ ಬೇರೆ ವ್ಯಕ್ತಿಗಳಿಗೆ ಹರಡಿದರೆ ಯಾರು ಜವಾಬ್ದಾರಿ. ಹೀಗಾಗಿ ಇಂತಹವರಿಂದ ಬೇರೆಯವರಿಗೂ ತಕ್ಕ ಪಾಠವಾಗಬೇಕು ಎನ್ನೋ ಉದ್ದೇಶದಿಂದ ಅಧಿಕಾರಿಗಳು ದೂರು ನೀಡಿದ್ದಾರೆ ಅಂತಾ ವಿರಾಜಪೇಟೆ ತಹಶೀಲ್ದಾರ್ ಹೇಳುತ್ತಿದ್ದಾರೆ.
ಅಧಿಕಾರಿಗಳ ಕಣ್ಣು ತಪ್ಪಿಸಿ ಬೇರೊಂದು ವಿಳಾಸದಲ್ಲಿದ್ದ ಸೋಂಕಿತ ವ್ಯಕ್ತಿ ತಪ್ಪು ಮಾಡಿದ್ದರೆ, ಸೋಂಕಿತನ ಹೆಸರನ್ನು ಬಹಿರಂಗಗೊಳಿಸಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ತಪ್ಪು ಮಾಡಿದ ವ್ಯಕ್ತಿ, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.