ಮಡಿಕೇರಿ : ನಗರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಭಿಯಾನಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚಾಲನೆ ನೀಡಿದರು. ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸುರ್ಜೇವಾಲಾ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹ ಧನ ಮತ್ತು ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಶೇ40ರಷ್ಟು ಕಮಿಷನ್ ಸರ್ಕಾರವಿದೆ. ದೇಶದಲ್ಲಿ ಲಂಚಾವತಾರ ಹೆಚ್ಚಾಗಿದೆ. ಇಂದು ಸಾಮಾನ್ಯ ಜನರು ಜೀವನ ಮಾಡಲು ಕಷ್ಟಪಡುವಂತಾಗಿದೆ. ರಾಜ್ಯ ಪ್ರವಾಹದಲ್ಲಿ ತತ್ತರಿಸಿದ್ದಾಗ ಯಾರು ಬಂದು ನೋಡಲಿಲ್ಲ. ಈಗ ವೋಟಿಗಾಗಿ ಮಾತ್ರ ರಾಜ್ಯಕ್ಕೆ ಆಗಾಗ ಬರುತ್ತಿದ್ದಾರೆ. ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು, ಕೆಲವು ಹತ್ಯಗಳು ನಡೆದವು. ಆ ಸಮಯದಲ್ಲಿ ಬಿಜೆಪಿ ಮುಖಂಡರು ಯಾರೂ ಭೇಟಿ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಂಚ ಮುಕ್ತ ಕನಾ೯ಟಕದ ಗುರಿ : ರಾಜ್ಯ ಸಕಾ೯ರದ ಬಜೆಟ್ 3.10 ಲಕ್ಷ ಕೋಟಿಗಳಾಗಿದೆ. ಶೇ.40ರಷ್ಟು ಕಮಿಷನ್ ಎಂದಾದರೆ 1.12 ಲಕ್ಷ ಕೋಟಿ ರೂಪಾಯಿ ಲಂಚಕ್ಕೆ ವಿನಿಯೋಗವಾಗುತ್ತದೆ. ಈ ಕಮಿಷನ್ ಹಣವನ್ನು ರಾಜ್ಯದ ಜನತೆಗೆ ಸೌಲಭ್ಯಗಳ ಮೂಲಕ ನೀಡಲು ಬಳಸುವುದಾಗಿ ಸುರ್ಜೇವಾಲ ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೇ ಲಂಚ ಮುಕ್ತ ಕನಾ೯ಟಕದ ಗುರಿ ಹೊಂದುವುದು ಮತ್ತು ಕಾಂಗ್ರೆಸ್ನ ಯಾವುದೇ ನಾಯಕರು ಲಂಚ ಪಡೆದದ್ದು ಗೊತ್ತಾದಲ್ಲಿ ಅಂಥವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡುವುದಾಗಿ ಹೇಳಿದರು. ಬಿಜೆಪಿ ಈಗ ದ್ವೇಷ ರಾಜಕೀಯಕ್ಕೆ ಮುಂದಾಗಿ ಕಾಂಗ್ರೆಸ್ ನಾಯಕರನ್ನು ಮುಗಿಸಿ ಎಂಬಂಥ ಕೀಳು ಹೇಳಿಕೆ ನೀಡುತ್ತಿದೆ ಎಂದರು.
ಕಾಂಗ್ರೆಸ್ ಕಾರ್ಡ್ ಅಭಿಯಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಎಐಸಿಸಿ ಕಾರ್ಯದರ್ಶಿ, ಕೊಡಗು ಉಸ್ತುವಾರಿ ಹಾಗೂ ಕೇರಳ ಶಾಸಕ ರೋಜಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ , ಮುಖಂಡರಾದ ಬಿ.ಎ ಜೀವಿಜಯ, ಎ.ಎಸ್ ಪೊನ್ನಣ್ಣ, ಡಾ.ಮಂಥರ್ ಗೌಡ, ಹರಪಳ್ಳಿ ರವೀಂದ್ರ, ಹೆಚ್.ಎಸ್ ಚಂದ್ರಮೌಳಿ, ವೀಣಾ ಅಚ್ಚಯ್ಯ, ಕೆ.ಪಿ ಚಂದ್ರಕಲಾ, ಟಿ.ಪಿ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಬಿಜೆಪಿಯದ್ದು ಡಬಲ್ ಭ್ರಷ್ಟಾಚಾರ ಸರ್ಕಾರ : ಬಿಜೆಪಿಯವರದ್ದು ಡಬಲ್ ಇಂಜಿನ್ ಸರಕಾರವಲ್ಲ, ಡಬಲ್ ಕರಪ್ಷನ್ ಸರಕಾರ. ಬಿಜೆಪಿ ಸರಕಾರ ರಾಜ್ಯವನ್ನು ಮಾರಾಟಕ್ಕೆ ಇಟ್ಟಿದೆ. ರಾಜ್ಯದ ಬಜೆಟ್ ನಲ್ಲೂ ಬಿಜೆಪಿ ಕಮಿಷನ್ ಇಟ್ಟುಕೊಳ್ಳುತ್ತಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಮಂಗಳೂರು ನಗರದ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಮುಖ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ 40% ಕಮಿಷನ್ ಸರಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. ದೇಶದ ಎಲ್ಲೆಡೆಯೂ ಬಸವರಾಜ ಬೊಮ್ಮಾಯಿಯವರು 40% ಸಿಎಂ, ಪೇ ಸಿಎಂ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದಾರೆ. ಕಾಂಗ್ರೆಸ್ ಮಾತ್ರ 40% ಕಮಿಷನ್ ಸರಕಾರದ ಬಗ್ಗೆ ಮಾತನಾಡುತ್ತಿಲ್ಲ. ಗುತ್ತಿಗೆದಾರರು, ಸ್ಕೂಲ್ ಅಸೋಸಿಯೇಷನ್ ನವರು ಈ ಬಗ್ಗೆ ಆರೋಪಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ತಮ್ಮದೇ ಪಕ್ಷದ ಮುಖಂಡ, ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ಅವರನ್ನೇ ಲೂಟಿ ಮಾಡಿದರು. ಇನ್ನು ರಾಜ್ಯವನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು. ಸ್ವತಃ ಬಿಜೆಪಿ ಮುಖಂಡರಾಗಿದ್ದ ಸಂತೋಷ್ ಪಾಟೀಲ್ ಅವರು 40 ಪರ್ಸೆಂಟ್ ಕಮಿಷನ್ ನೀಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಾಜ್ಯದ ಅನೇಕ ಗುತ್ತಿಗೆದಾರರು ಸಾವಿಗೆ ಶರಣಾಗಿದ್ದಾರೆ. ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಅವರೇ, ನಿಮಗೆಷ್ಟು ಹಣ ಬೇಕು ಹೇಳಿ, ನಾವು ಸಂಗ್ರಹಿಸಿ ಕೊಡ್ತೀವಿ. ಆದರೆ ಮೃತಪಟ್ಟ ಸಂತೋಷ್ ಪಾಟೀಲ್ರನ್ನು ವಾಪಸ್ ತರುತ್ತೀರಾ? ನಿಮ್ಮ ಲೂಟಿ ನಿಲ್ಲುವುದು ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಬೆಳಗಾವಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ತಮ್ಮದೇ ಪಕ್ಷದ ಸಂತೋಷ್ ಪಾಟೀಲ್ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಬಿಜೆಪಿಯ 8 ಸಚಿವರು, 17 ಶಾಸಕರು 40ಪರ್ಸೆಂಟ್ ಕಮಿಷನ್ಗೆ ಒತ್ತಾಯಿಸುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪ ಮಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘವೂ ಕಮಿಷನ್ ಇಲ್ಲದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದಿದೆ. ಸ್ವತಃ ಗದಗದ ಲಿಂಗಾಯತ ಮಠಕ್ಕೆ ಅನುದಾನ ನೀಡಲು ಶೇ 30ರಷ್ಟು ಕಮಿಷನ್ಗೆ ಒತ್ತಾಯಿಸಿದ್ದಾಗಿ ಸ್ವತಃ ಅಲ್ಲಿನ ಸ್ವಾಮೀಜಿಯೇ ಆರೋಪಿಸಿದ್ದಾರೆ ಎಂದರು.
ಅಶ್ವತ್ಥನಾರಾಯಣ್ ಅವರು ಸಿದ್ದರಾಮಯ್ಯರನ್ನು ಕೊಲ್ಲಬೇಕು ಎಂದಿದ್ದು, ಮೋದಿಯವರು ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನ ಮಾಡಿದ್ದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ನಕ್ಸಲರ ಹಿಂಸೆ ಹಾಗೂ ಬಿಜೆಪಿಯವರ ಹಿಂಸೆಗೆ ಯಾವ ವ್ಯತ್ಯಾಸವೂ ಇಲ್ಲ. ಕಾಂಗ್ರೆಸ್ ನಾಯಕರನ್ನು ಅವಮಾನ ಮಾಡುವುದಕ್ಕೆ ಬಿಜೆಪಿಗಿರುವ ಸೋಲಿನ ಭೀತಿ, ನಮ್ಮ ಗ್ಯಾರಂಟಿ ಕಾರ್ಡ್ ಕಾರಣ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಎರಡು ತಿಂಗಳುಗಳ ಕಾಲ ಪಕ್ಷಕ್ಕಾಗಿ ದುಡಿದಲ್ಲಿ ಇಡೀ ಕರ್ನಾಟಕವನ್ನು ಬಲಗೊಳಿಸುತ್ತೇವೆ ಎಂದು ಹೇಳಿದರು.
ಕರ್ನಾಟಕವನ್ನು ಬಿಜೆಪಿ ಸರ್ಕಾರ ಮಾರಾಟಕ್ಕಿಟ್ಟಿದೆ : ಎಸ್ಐ ಹುದ್ದೆಯನ್ನು 80 ಲಕ್ಷಕ್ಕೆ ಮಾರಾಟಕ್ಕೆ ಇಟ್ಟರು. ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ, ಡಿಸಿಸಿ ಬ್ಯಾಂಕ್ಗಳ ಹುದ್ದೆ, ಕೆಎಂಎಫ್ ಮಾತ್ರವಲ್ಲದೆ ಪೌರ ಕಾರ್ಮಿಕ ಹುದ್ದೆಗಳನ್ನೂ ಮಾರಾಟಕ್ಕೆ ಇಟ್ಟು ಭ್ರಷ್ಟಾಚಾರ ನಡೆಸಲಾಗಿದೆ. ಇಡೀ ಕರ್ನಾಟಕವನ್ನು ಬಿಜೆಪಿ ಸರ್ಕಾರ ಮಾರಾಟಕ್ಕೆ ಇಟ್ಟಿದೆ. ಬಿಜೆಪಿ ಸರ್ಕಾರ ಇರುವವರೆಗೂ ನಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ಮರೀಚಿಕೆಯಾಗಲಿದೆ ಎಂದರು.
ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಅವರು ಸಿಎಂ ಸ್ಥಾನ ಎರಡು ಸಾವಿರ ಕೋಟಿ ರೂಪಾಯಿಗೆ ಮಾರಾಟಕ್ಕಿದೆ ಎಂದಿದ್ದಾರೆ. ಒಂದು ವೇಳೆ ಅವರು ಸುಳ್ಳು ಹೇಳಿದ್ದೇ ಆಗಿದ್ದರೆ ಅವರನ್ನು ಕಿತ್ತೆಸೆಯಿರಿ. ಸತ್ಯ ಹೇಳಿರುವುದಾದರೆ ಬೊಮ್ಮಾಯಿ ಸಿಎಂ ಆಗಲು ಎಷ್ಟು ಹಣ ಕೊಟ್ಟಿದ್ದಾರೆ, ಆ ಹಣ ಎಲ್ಲಿಂದ ಬಂದಿದೆ ಎಂಬುದನ್ನು ಮೋದಿ, ನಡ್ಡಾ ಉತ್ತರಿಸಲಿ ಎಂದು ಅವರು ಸವಾಲು ಹಾಕಿದರು.
ಬಿಜೆಪಿಯವರದ್ದು ಗೋಡ್ಸೆಯ ಮನಸ್ಥಿತಿ : ಬೆಳಗಾವಿಗೆ ಬಂದಿದ್ದ ಪ್ರಧಾನಮಂತ್ರಿಯವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನ ಮಾಡಿದ್ದಾರೆ. ಬಿಜೆಪಿ ಸಚಿವ ಅಶ್ವತ್ಥ ನಾರಾಯಣ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೊಲ್ಲಿ ಅಂತಾರೆ. ಅಶ್ವತ್ಥನಾರಾಯಣ, ಬೊಮ್ಮಾಯಿ, ನಳಿನ್ ಕುಮಾರ್ ಅವರಿಗೆ ನಾನು ಸವಾಲು ಹಾಕುತ್ತೇನೆ. ನೀವು ಸಮಯ ಮತ್ತು ಸ್ಥಳವನ್ನು ನಿಗದಿಪಡಿಸಿ, ನಾನು ಸ್ವತಃ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಕರೆದುಕೊಂಡು ನಿಮ್ಮೆದುರು ನಿಲ್ಲಿಸುತ್ತೇನೆ ಎಂದು ಸುರ್ಜೇವಾಲಾ ಹೇಳಿದರು. ಬಿಜೆಪಿಯವರ ಹಿಂಸೆಯ ಮನಸ್ಥಿತಿ ಗೋಡ್ಸೆಯ ಮನಸ್ಥಿತಿಯನ್ನು ಸೂಚಿಸುತ್ತದೆ. ನಿಮಗೆ ಸೋಲಿನ ಭೀತಿ ಕಾಡಿರುವುದರಿಂದಲೇ ಕಾಂಗ್ರೆಸ್ ನಾಯಕರನ್ನು ಕೊಲ್ಲಲು ಉದ್ದೇಶಿಸಿದ್ದೀರಿ. ನೀವು ಎಷ್ಟೇ ಮಂದಿಯನ್ನು ಕೊಂದರೂ ಕಾಂಗ್ರೆಸ್ ಅಭಿಯಾನ ಮಾತ್ರ ನಿಲ್ಲದು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮುಖಂಡರಾದ ಮಧು ಬಂಗಾರಪ್ಪ, ಧ್ರುವನಾರಾಯಣ, ರೋಜಿ ಜಾನ್, ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಹರೀಶ್ ಕುಮಾರ್, ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಮಿಥುನ್ ರೈ, ಐವನ್ ಡಿಸೋಜ, ಮಂಜುನಾಥ ಭಂಡಾರಿ ಮತ್ತಿತರರು ಇದ್ದರು.
ಇದನ್ನೂ ಓದಿ : ಕಾಶಿ, ಮಥುರಾದಲ್ಲೂ ದೇಗುಲ ನಿರ್ಮಾಣ: ಕೆ ಎಸ್ ಈಶ್ವರಪ್ಪ