ಮಡಿಕೇರಿ: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಅವರಿಗೂ ಮಂಜಿನ ನಗರಿ ಮಡಿಕೇರಿಯ ಕಾಫಿ ಬೆಳೆಗಾರರಿಗೂ ಅವಿನಾಭಾವ ಸಂಬಂಧವಿತ್ತು. ಕೊಡಗಿನ ಕಾಫಿಗೆ ವಿಶೇಷ ಆದ್ಯತೆ ನೀಡಿದ್ದರು.
ಎಬಿಸಿ (ಅಮಾಲ್ಗಮೇಟೆಡ್ ಬೀನ್ ಕಾಫಿ ಲಿಮಿಟೆಡ್) ಮೂಲಕ ಕೊಡಗಿನ ಕಾಫಿ ಖರೀದಿಸುತ್ತಿದ್ದರು. ಕಾಫಿಗೆ ಸೂಕ್ತ ಬೆಲೆ ಸಿಗದೇ ತತ್ತರಿಸಿದ್ದ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಆಸರೆಯಾಗಿದ್ದರು. ಕೊಡಗಿನ ಸಣ್ಣ ಕಾಫಿ ಬೆಳೆಗಾರರಿಂದ ಕಾಫಿ ಬೀಜ ಖರೀದಿಸಿ ಸೂಕ್ತ ಬೆಲೆ ನಿಗದಿಪಡಿಸಿದ್ದನ್ನು ಸ್ಮರಿಸಬಹುದು.
ಅವರ ಮಾಲೀಕತ್ವದ ಕಾಫಿ ಗ್ಲೋಬಲ್ ಲಿಮಿಟೆಡ್, ಅರೇಬಿಕಾ ತಳಿಯ ಕಾಫಿ ಬೀಜಗಳನ್ನು ವಿತರಿಸುತ್ತಿತ್ತು. ವಿಶ್ವವ್ಯಾಪಿ 1,722 ಕೆಫೆ ಕಾಫಿ ಡೇಗಳನ್ನು ಹೊಂದಿದ್ದರು. ಸಿದ್ದಾರ್ಥ್ ಅಗಲಿಕೆಯಿಂದ ಕೊಡಗಿಗೆ ತುಂಬಲಾರದ ನಷ್ಟ ಉಂಟಾಗಿದೆ. ಕೊಡಗಿನಲ್ಲಿ ಸಿದ್ದಾರ್ಥ್ ಮಾಲೀಕತ್ವದ ಕೆಫೆ ಕಾಫಿ ಡೇ ಬ್ರ್ಯಾಂಚ್ ಇದ್ದು, ಜಿಲ್ಲೆಯ ಏಕೈಕ ಕಾಫಿ ಡೇಗೂ ಸಿಬ್ಬಂದಿ ಬೀಗ ಹಾಕಿ ಅಗಲಿರುವ ಮಾಲೀಕನಿಗೆ ಕಂಬನಿ ಮಿಡಿದಿದ್ದಾರೆ.
ಕಾಫಿ ಬೆಳೆಗಾರರಾದ ಚಿದ್ವಿಲಾಸ್ ಪ್ರತಿಕ್ರಿಯಿಸಿ, ಉದಯೋನ್ಮುಖ ಉದ್ಯಮಿಗಳಿಗೆ ಒಬ್ಬ ಆದರ್ಶ ವ್ಯಕ್ತಿಯಾಗಿ ಸುಪ್ರಸಿದ್ಧ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ್ ಹೆಗ್ಡೆ ಮೃತಪಟ್ಟಿರುವುದನ್ನು ನಮ್ಮಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಕೆಫೆ ಕಾಫಿ ಡೇ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೇಯಸ್ಸು ಅವರದು. ದೇಶದ ಕಾಫಿ ಮಾರುಕಟ್ಟೆಯ ಬೆಲೆ ಹಾಗೂ ಉದ್ಯಮ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡುತ್ತಿದ್ದರು ಎಂದು ವಿಷಾದ ವ್ಯಕ್ತಪಡಿಸಿದರು.
ಕಾಫಿ ಮಾರಾಟ ಮಾತ್ರವಲ್ಲದೇ, ಎಬಿಸಿ ಕಂಪನಿ ಮೂಲಕ ಅತಿವೃಷ್ಟಿ-ಅನಾವೃಷ್ಟಿಯ ಅಡಕತ್ತರಿಯಲ್ಲಿ ಸಿಲುಕಿದಾಗಲೂ ಕಾಫಿ ಬೆಳೆಗಾರರ ಜೊತೆ ನ್ಯಾಯ ಸಮ್ಮತ ವ್ಯವಹಾರ ನಡೆಸಿದ್ದರು. ಪ್ರತ್ಯೇಕ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಸಿ ಜೀವನಕ್ಕೆ ಆಸರೆ ಆಗಿದ್ದವರು ಈಗ ನಮ್ಮನ್ನು ಅಗಲಿದ್ದಾರೆ. ಸಿದ್ದಾರ್ಥ್ ಅವರ ಸಾವು ತುಂಬ ನೋವು ತಂದಿದೆ ಎಂದು ಸಂತಾಪ ಸೂಚಿಸಿದರು.