ಮಡಿಕೇರಿ(ಕೊಡಗು): ಜಿಲ್ಲೆಯಲ್ಲಿ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಸಾಕಷ್ಟು ನಷ್ಟವಾಗಿದೆ. ಜಲಪ್ರಳಯದ ಹೊಡೆತಕ್ಕೆ ಸಿಲುಕಿ ಜನರು ನಲುಗಿದ್ದಾರೆ. ಮಳೆಯಿಂದ ಆಗಿರುವ ಹಾನಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಕೆಲವು ಭಾಗಗಳಲ್ಲಿ ಪರಿಶೀಲನೆ ನಡೆಸಿದೆ.
ಮಡಿಕೇರಿ ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂ ಕುಸಿತ, ಕಾಫಿ ಬೆಳೆ ಹಾನಿ, ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ, ಕೊಯನಾಡು ಶಾಲೆ ಬಳಿ ಭೂ ಕುಸಿತ ಹಾಗೂ ಕಿಂಡಿ ಆಣೆಕಟ್ಟು ಪ್ರದೇಶವನ್ನು ವೀಕ್ಷಿಸಿದ್ದಾರೆ. ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ ಜಿಲ್ಲಾಧಿಕಾರಿ ಡಾ.ಸತೀಶ್ ಅವರಿಂದ ಮಾಹಿತಿ ಪಡೆದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಭೂಕುಸಿತ, ಬೆಳೆ ಹಾನಿ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಕೇಂದ್ರ ಅಧ್ಯಯನ ತಂಡ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳ ವೀಕ್ಷಣೆ ಕೈಗೊಂಡಿದೆ ಎಂದರು.
ಇದನ್ನೂ ಓದಿ: ಕೊಡಗಿನಲ್ಲಿ ಭಾರಿ ಮಳೆ.. ಪ್ರವಾಹಕ್ಕೆ ನಲುಗಿದ ಜನರಿಂದ ಅನುದಾನ ಬಿಡುಗಡೆಗೆ ಆಗ್ರಹ