ಕೊಡಗು: ಪ್ರವಾಹಕ್ಕೆ ಸಿಕ್ಕಿ ನಿರಾಶ್ರಿತ ಕೇಂದ್ರ ಸೇರಿರುವ ಬಹುತೇಕ ಮಂದಿ ಎಲ್ಲವನ್ನೂ ಕಳೆದುಕೊಂಡಿದ್ದು, ಮಕ್ಕಳಿಗೆ ಒಂದು ಪ್ಯಾಕ್ ಬಿಸ್ಕತ್ ತಂದು ಕೊಡಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ನಮ್ಮ ಸ್ಥಿತಿ ಬಿಕ್ಷುಕರಂತೆ ಆಗಿದೆ ಎಂದು ಸಂತ್ರಸ್ತೆ ಸಂಗೀತಾ ಕೇಂದ್ರ ಅಧ್ಯಯನ ತಂಡದ ಎದುರು ಭಾವುಕರಾದರು.
ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರನ್ನು ಭೇಟಿ ಮಾಡಿದ ಕೇಂದ್ರ ಅಧ್ಯಯನ ತಂಡ, ಸಂತ್ರಸ್ತರ ನೊವು ಆಲಿಸಿದ್ದಾರೆ. ಬಹುತೇಕ ನಿರಾಶ್ರಿತರು ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದೀಗ ನಾವು ಬಾಡಿಗೆ ಕೊಡುವ ಸ್ಥಿತಿಯಲ್ಲೂ ಇಲ್ಲ ಎಂದು ಅಧ್ಯಯನ ತಂಡದ ಮುಂದೆ ತಮ್ಮ ಅಳಲು ತೋಡಿಕೊಂಡರು.
ನಾವು ನಿಮ್ಮಿಂದ ಬೇರೇನೂ ನಿರೀಕ್ಷೆ ಮಾಡುತ್ತಿಲ್ಲ. ನೆಮ್ಮದಿಯಿಂದ ಇರಲು ಒಂದು ಶಾಶ್ವತ ಸೂರು ಕೇಳುತ್ತಿದ್ದೇವೆ. ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಪ್ರತಿವರ್ಷ 80 ಸಾವಿರ ಪ್ಯಾಕೇಜ್ ಕೊಡುತ್ತೆ. ಆ ಹಣದಿಂದ ನದಿ ಪಾತ್ರದ ನಿರಾಶ್ರಿತರು ಮನೆಗಳನ್ನು ಪುನರ್ ನಿರ್ಮಿಸುತ್ತಾರೆ. ಮತ್ತೆ ಜೂನ್‌ನಲ್ಲಿ ಮಳೆಗಾಲ ಪ್ರಾರಂಭವಾದಾಗ ಪ್ರವಾಹ ಬಂದು ಪುನಃ ಮನೆಗೆ ಹಾನಿ ಆಗುತ್ತೆ. ವರ್ಷಂಪ್ರತಿ ನಮಗೆ ಇದೇ ಸಮಸ್ಯೆ. ಹೀಗೆ ಮಾಡುವ ಬದಲು ನಮಗೆ ಸರ್ಕಾರದ ಸುರಕ್ಷಿತ ಜಾಗದಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಾಫಿ ಬೆಳೆಗಾರರಾದ ವಸಂತ್ ಮಾತನಾಡಿ, ವಿಪರೀತ ಮಳೆಯ ಪರಿಣಾಮ ಕಾಫಿ, ಕಾಳುಮೆಣಸು ಮತ್ತಿತರ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ನಾಶವಾಗಿರುವ ಗಿಡಗಳನ್ನು ಮತ್ತೆ ಬೆಳೆಯಲು 5 ರಿಂದ 10 ವರ್ಷಗಳಾದರೂ ಬೇಕು. ನಮ್ಮ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಎಕರೆಗೆ ಕನಿಷ್ಠ ಒಂದು ಲಕ್ಷ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘಟನೆಯ ಮುಖಂಡ ಭರತ್ ಮಾತನಾಡಿ, ನಾವು ಪಾಕಿಸ್ತಾನದಲ್ಲಿ ಇಲ್ಲ. ನಾವೂ ಭಾರತೀಯರೇ. ಮಳೆಯಿಂದ ಇಲ್ಲಿನ ಹಲವರು ಮನೆ-ಮಠ ಕಳೆದುಕೊಂಡು ತೀರಾ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರಿಗೆ ಶಾಶ್ವತ ಸೂರು ಏಕೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.