ಮಡಿಕೇರಿ (ಕೊಡಗು): ತಾಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರವಾಸಿಗರಿಗೆ ಆತಿಥ್ಯ ನೀಡಿದ್ದ, ಹೋಂ ಸ್ಟೇ ಮಾಲೀಕರು ಹಾಗೂ ಅಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊರೊನಾ ವೈರಸ್ ಹಿನ್ನಲೆ, ಜಿಲ್ಲಾಡಳಿತ ಹೋಂ ಸ್ಟೇ ತೆರೆಯದಂತೆ ಆದೇಶ ನೀಡಿದೆ. ಆದರೆ, ಮರಗೋಡಿನ ಭಾರತಿ ಎಂಬುವವರ ಮನೆಯಲ್ಲಿ 3 ದಿನಗಳಿಂದ ಅನಧಿಕೃತವಾಗಿ ಪ್ರವಾಸಿಗರನ್ನು ಇರಿಸಿಕೊಳ್ಳಲಾಗಿತ್ತು. ಅಲ್ಲದೆ, ಈ ಪ್ರವಾಸಿಗರು ಡ್ರೋನ್ ಕ್ಯಾಮೆರಾ ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ಹೋಂ ಸ್ಟೇ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಹೋಂ ಸ್ಟೇ ಅಸೋಸಿಯೇಷನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತ್ತು.
ಗ್ರಾಮಸ್ಥರ ದೂರಿನ ಆಧಾರದ ಮೇಲೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ಅಶ್ರಫ್, ಠಾಣಾಧಿಕಾರಿ ಚಂದ್ರಶೇಖರ್ ನಿರ್ದೇಶನದಲ್ಲಿ ಗ್ರಾಮೀಣ ಪೊಲೀಸರ ತಂಡ ಭಾರತಿ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದು, ಮೈಸೂರಿನ ಮೂವರು ಯುವಕರು ಉಳಿದುಕೊಂಡಿರುವುದು ತಿಳಿದು ಬಂದಿದೆ. ಈ ವೇಳೆ ಇವರು ತಮ್ಮ ಸಂಬಂಧಿಕರೆಂದು ಮನೆಯವರು ಸುಳ್ಳು ಹೇಳಿದ್ದು, ವಿಳಾಸ ಪರಿಶೀಲಿಸಿದಾಗ ಮೈಸೂರಿನ ಪ್ರವಾಸಿಗರೆಂದು ತಿಳಿದುಬಂದಿದೆ.