ಕೊಡಗು: ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದ್ದು, ನಮ್ಮಲ್ಲಿ ಹಣದ ಅಭಾವವಿಲ್ಲ, ಈಗಾಗಲೇ ಜಿಲ್ಲೆಗೆ 100 ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಬಿಜೆಪಿ ಶಾಸಕರು ಹಾಗೂ ಸಂಸದರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು. ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಈಗಾಗಲೇ ಪ್ರಾಕೃತಿಕ ನಿರ್ವಹಣೆಗೆ 100 ಕೋಟಿ ಬಿಡುಗಡೆ ಮಾಡಿದ್ದೇವೆ. 3 ತಾಲೂಕುಗಳ ತಹಶೀಲ್ದಾರ್ ಖಾತೆಗೆ ತಲಾ 1 ಕೋಟಿ ಬಿಡುಗಡೆ ಮಾಡಲಾಗಿದೆ. ಸಂತ್ರಸ್ತರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದರು.
ಎರಡನೇ ಹಂತದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ. ಅನಿವಾರ್ಯ ಎದುರಾದರೆ ಸಂತ್ರಸ್ತರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆಗೂ ಸಿದ್ದ ಎಂದು ಭರವಸೆ ನೀಡಿದ್ದಾರೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 50 ಸಾವಿರ ಬಿಡುಗಡೆ ಮಾಡಲಾಗಿದೆ. ಕುಶಾಲನಗರ, ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ತಲಾ 10 ಲಕ್ಷ ಕೊಡಲಾಗಿದೆ. ಬಿಎಸ್‌ಎನ್‌ಎಲ್ ನೆಟ್ವರ್ಕ್ ಜನರೇಟರ್‌ಗಳಿಗೆ ಡೀಸೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆಂದ್ರ ಸಚಿವ ಸದಾನಂದಗೌಡ, ಈಶ್ವರಪ್ಪ, ಸಿ.ಟಿ.ರವಿ, ವಿ. ಸೋಮಣ್ಣ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ಪ್ರೀತಂ ಜೆ.ಗೌಡ ನೇತೃತ್ವದ ತಂಡ ಸಭೆಯಲ್ಲಿ ಪ್ರವಾಹ ಅನಾಹುತಗಳ ಬಗ್ಗೆ ಮಾಹಿತಿ ಪಡೆಯಿತು. ಕೊಡಗಿನಲ್ಲಿ 600 ಕುಟುಂಬಗಳ ಸುಮಾರು 2000 ಸಾವಿರ ಮಂದಿ ಪ್ರವಾಹ ಸಂತ್ರಸ್ತರಿದ್ದು, ಎಲ್ಲರಿಗೂ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ದಿನದ 24 ಗಂಟೆಯೂ ಜಿಲ್ಲಾಡಳಿತ ಸಂತ್ರಸ್ತರಿಗೆ ಸ್ಪಂದಿಸುತ್ತಿದೆ ಎಂದು ಹೇಳಿದ್ದಾರೆ.