ಮಡಿಕೇರಿ (ಕೊಡಗು) : ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿದೆ. ಬಜರಂಗದಳ ಮತ್ತು ಪಿಎಫ್ಐಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ. ಇದರಿಂದ ಕಾಂಗ್ರೆಸ್ನ ಅಸಲಿ ಬಣ್ಣ ಬಯಲಾಗಿದೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮಡಿಕೇರಿ ಬಿಜೆಪಿ ಅಭ್ಯರ್ಥಿ ಎಂ. ಪಿ ಅಪ್ಪಚ್ಚು ರಂಜನ್ ಪರ ಆಯೋಜಿಸಲಾಗಿದ್ದ ಮತಯಾಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಹಲವು ಮದರಸಾಗಳನ್ನು ಮುಚ್ಚಿಸಿದ್ದೇನೆ. ಹಲವು ಪಿಎಫ್ಐ ಕಾರ್ಯಕರ್ತರನ್ನು ಜೈಲಿಗಟ್ಟಿದ್ದೇನೆ. ಪಿಎಫ್ಐ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದು, ಕಾಂಗ್ರೆಸ್ ಬಜರಂಗದಳವನ್ನು ಬ್ಯಾನ್ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಇತ್ತೀಚೆಗೆ ಘೋಷಣೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ, ರಾಜ್ಯದ ಆಯವ್ಯಯದಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಅನ್ಯಮತೀಯರಿಗೆ ಮೀಸಲಿಡುವುದಾಗಿ ಹೇಳಿದೆ. ಯಾಕೆ ಕರ್ನಾಟಕದಲ್ಲಿ ಹಿಂದೂಗಳಿಲ್ಲವೇ, ಕ್ರೈಸ್ತರಿಲ್ಲವೇ, ಪರಿಶಿಷ್ಟ ಜಾತಿ ಪಂಗಡಗಳ ಜನರಿಲ್ಲವೇ, ಅಷ್ಟೂ ಮೊತ್ತವನ್ನು ಮುಸ್ಲಿಂರಿಗಾಗಿಯೇ ಮೀಸಲಿಡುವ ಅಗತ್ಯ ಏನಿದೆ. ಕಾಂಗ್ರೆಸ್ ಕರ್ನಾಟಕ ಜನತೆಯ ಪಕ್ಷವಲ್ಲ. ಅದು ಭಾರತೀಯರ ಪಕ್ಷವಲ್ಲ, ಬದಲಾಗಿ ಟಿಪ್ಪು ಸುಲ್ತಾನನ ಪಕ್ಷ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಹೇಳಿದರು.
ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ನೀಡಲಾಗುವುದಿಲ್ಲ. ಜಾತಿಯ ಆಧಾರದಲ್ಲಿ ನೀಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಂರಿಗೆ ಮೀಸಲಾತಿ ನೀಡುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಇನ್ನೂ ಹತ್ತು ಜನ್ಮ ಬೇಕಾಗುತ್ತದೆ ಎಂದು ಸಿಎಂ ಹಿಮಂತ್ ತಿರುಗೇಟು ನೀಡಿದರು.
ಕಾಂಗ್ರೆಸ್ ಘೋಷಿಸಿರುವ ವಿವಿಧ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗೆ ಅವರ ಬಗ್ಗೆಯೇ ಸ್ವತಃ ಗ್ಯಾರಂಟಿಯಿಲ್ಲ. ಅವರ ಸಂಸತ್ ಸದಸ್ಯತ್ವ ಉಳಿಯುವುದೋ, ಇಲ್ಲವೋ ಎಂಬುದರ ಬಗ್ಗೆ ಖಾತ್ರಿಯಿಲ್ಲ. ಏನು ಹೇಳಬೇಕು, ಏನು ಬಿಡಬೇಕು ಎಂಬುದರ ಬಗ್ಗೆ ಗೊತ್ತಿಲ್ಲ. ಹೀಗಿರುವಾಗ ಅವರು ನೀಡಿರುವ ಗ್ಯಾರಂಟಿಗಳಿಗೇನು ಗ್ಯಾರಂಟಿ ಎಂದರು. ಕಾಂಗ್ರೆಸ್ ನ ಗ್ಯಾರಂಟಿ ಆಮಿಷಗಳಿಗೆ ಬಲಿಯಾಗಬೇಡಿ. ಕರ್ನಾಟಕದ ಮತದಾರರು ಬಿಜೆಪಿಗೆ 150 ಸ್ಥಾನಗಳನ್ನು ನೀಡಿ ಮರಳಿ ಅಧಿಕಾರ ನೀಡಬೇಕು. ಆಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ರು.
ಇದಕ್ಕೆ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಿದ್ದರಾಮಯ್ಯ ಸೋಲಲಿ ಎಂದು ಡಿ. ಕೆ ಶಿವಕುಮಾರ್ ಪೂಜೆ ಮಾಡಿಸುತ್ತಾರೆ. ಕಾಂಗ್ರೆಸ್, ಬಿಜೆಪಿ ಎರಡಕ್ಕೂ ಬಹುಮತ ಬರದಿರಲಿ ಎಂದು ಹೆಚ್.ಡಿ ದೇವೇಗೌಡರು ಪೂಜೆ ಮಾಡಿಸುತ್ತಾರೆ. ಆದರೆ ಈ ಬಾರಿಯ ಚುನಾವಣೆಯ ನಂತರ ಈ ಎರಡೂ ಪಕ್ಷಗಳು ಮಣ್ಣು ಮುಕ್ಕಲಿವೆ ಎಂದು ಭವಿಷ್ಯ. ಸಭೆಯಲ್ಲಿ ಬಸವಾಪಟ್ಟಣದ ಬಸವಲಿಂಗ ಸ್ವಾಮೀಜಿ, ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಮತ್ತು ಜಿಲ್ಲಾ ಬಿಜೆಪಿಯ ಎಲ್ಲಾ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ : ಬಾದಾಮಿ, ಹಾವೇರಿಯಲ್ಲಿ ಮೋದಿ ಭರ್ಜರಿ ಪ್ರಚಾರ : ಕಾಂಗ್ರೆಸ್ ವಿರುದ್ಧ ವಾಗ್ದಾಳಿ