ಕೊಡಗು: ಕೇರಳದಲ್ಲಿ ದಿಗಿಲು ಹುಟ್ಟಿಸಿದ ಹಂದಿಜ್ವರ ಗಡಿ ಭಾಗ ಕೊಡಗಿನಲ್ಲಿ ಕಾಣಿಸಿಕೊಂಡಿದೆ. ಕೇರಳದಿಂದ ಹಂದಿ ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಬಿದ್ದಿದ್ದು, ಸಾಕಾಣಿಕಾ ಕೇಂದ್ರದ 1 ಕಿ. ಮೀ ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಮತ್ತು 10 ಕಿ. ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಜಿಲ್ಲಾಧಿಕಾರ ಘೋಷಿಸಿದೆ.
ಮಡಿಕೇರಿಯ ತಾಲೂಕಿನ ಗಾಳಿಬೀಡು ಗ್ರಾಮದ ಸಾಕಾಣಿಕೆ ಕೇಂದ್ರದ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಇಲ್ಲಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧಿಸಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ಆದೇಶಿಸಿದೆ. ರೋಗ ಪಸರಿಸದಂತೆ ಮುಂಜಾಗ್ರತೆ ಕ್ರಮವಾಗಿ ರೋಗಪೀಡಿತ ಹಂದಿ ಫಾರಂನಿಂದ 1 ಕಿ. ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಂದಿ ಸಾಕಣೆ ಕೇಂದ್ರಗಳನ್ನು ಮುಚ್ಚುವಂತೆ ಮತ್ತು ಅಲ್ಲಿರುವ ಎಲ್ಲ ಹಂದಿಗಳನ್ನು ನಿಯಮಾನುಸಾರ ವಧಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸೋಂಕು ಕಂಡುಬಂದ ಹಂದಿ ಫಾರಂ ಅನ್ನು ಶುಚಿಗೊಳಿಸಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಈ ಪ್ರದೇಶದ ಬಳಿ ವಾಹನ ಮತ್ತು ಜನರ ಸಂಚಾರವನ್ನು ನಿರ್ಬಂಧಿಸಬೇಕೆಂದು ಪಶುವೈದ್ಯರು ಕ್ರಮ ವಹಿಸುತ್ತಿದ್ದಾರೆ.
ಹಂದಿ ಮಾಂಸ ಸಾಗಣೆ ನಿಷೇಧ: ಕೇರಳದ ಕೆಲವು ಜಿಲ್ಲೆಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂತಾರಾಜ್ಯ ಹಂದಿ ಮಾಂಸ ಸಾಗಣೆ ನಿಷೇಧಿಸಲಾಗಿದೆ. ಕೊಡಗು ಪಶುವೈದ್ಯಕೀಯ ಇಲಾಖೆಯು ಅಂತಾರಾಜ್ಯ ಹಂದಿಮಾಂಸ ಮಾರಾಟ ಮತ್ತು ಸಾಗಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಜಿಲ್ಲೆಯ ಚೆಕ್‌ಪೋಸ್ಟ್‌ಗಳಿಗೆ ಇಲಾಖೆ ಸಿಬ್ಬಂದಿಯನ್ನು ನೇಮಿಸಿದ್ದು, ಅವರು ಎಎಸ್‌ಎಫ್ ಹರಡುವುದನ್ನು ತಡೆಯಲು ನಿಗಾ ವಹಿಸಿದ್ದಾರೆ. ಯಾವುದೇ ಹಂದಿಗಳು ವೈರಸ್ ಸೋಂಕಿಗೆ ಒಳಗಾಗಿದ್ದರೆ ಇಲಾಖೆಗೆ ತಕ್ಷಣ ವರದಿ ಮಾಡುವಂತೆ ಸಾಕಾಣಿಕೆದಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹಂದಿ ಜ್ವರ ಹೆಚ್ಚಳ: ನಾಗ್ಪುರದಲ್ಲಿ 200 ಮಂದಿಯಲ್ಲಿ ಪತ್ತೆ