ವಿರಾಜಪೇಟೆ: ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಆದಿವಾಸಿ ಯುವಕರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ತಾಲೂಕಿನ ದಿಡ್ಡಳ್ಳಿ ಸಮೀಪದ ಅಣ್ಣಿಗೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ದಿಡ್ಡಳ್ಳಿ ನಿವಾಸಿಗಳಾದ ನಾಗೇಶ್ ಹಾಗೂ ಸೋಮು ಅವರು ವಾಪಸ್ ಬರುವಾಗ ಅರಣ್ಯ ರಕ್ಷಕರಾದ ನಾಗೇಶ್ ಮತ್ತು ತಿಮ್ಮ ಎಂಬುವವರು ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದಿಡ್ಡಳ್ಳಿಯಿಂದ ಅಣ್ಣಿಗೇರಿಗೆ ಎಳೆದೊಯ್ದು ಮನ ಬಂದಂತೆ ಹಲ್ಲೆ ಮಾಡಿದ್ದು, ಕೈ-ಕಾಲು ಕಂದು ಹೋಗಿವೆ. ಮರಗಳನ್ನು ಅವರೇ ಕತ್ತರಿಸಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮೂಲ ನೆಲೆಗಳಲ್ಲಿ ಗೆಡ್ಡೆ, ಗೆಣಸು, ಮೇವು, ಉರುವಲಿಗೆ ಒಣ ಮರಗಳನ್ನು ಬಳಸಿಕೊಳ್ಳುವ ಹಕ್ಕು ಆದಿವಾಸಿಗಳಿಗೆ ಇದೆ. ಹೀಗಿದ್ದರೂ ವಿನಾಕಾರಣ ಹಲ್ಲೆ ಮಾಡಿದ್ದಾರೆ. ಕೂಡಲೇ ಇಬ್ಬರನ್ನೂ ಅಮಾನತು ಮಾಡಬೇಕು. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವ ಮತ್ತಿಗೋಡಿನ ಆರ್‌ಎಫ್ಒ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆರ್‌ಎಫ್‌ಒ, ನಾಗರಹೊಳೆ ರಾಷ್ಟ್ರೀಯ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ 50 ಸಾವಿರ ಮೌಲ್ಯದ ತೇಗದ ಮರಗಳನ್ನು ಕಡಿದು ಸಾಗಿಸುತ್ತಿದ್ದಾಗ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದೇವೆ. ಇಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಪಡಿಸಿಯೇ ಪ್ರಕರಣ ದಾಖಲಿಸಿ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಿದ್ದೇವೆ.ಈಗಾಗಲೇ ಪ್ರಕರಣ ತನಿಖಾ ಹಂತದಲ್ಲಿದೆ. ಘಟನೆ ನಡೆದು ನಾಲ್ಕೈದು ದಿನಗಳ ನಂತರ ಸಿಬ್ಬಂದಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಯಾರೂ ಹಲ್ಲೆ ನಡೆಸಿಲ್ಲ.ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಆರ್‌ಎಫ್‌ಒ ಶಿವಾನಂದ ನಿಂಗಾಣಿ ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿದ್ದಾರೆ.