ಕೊಡಗು: ಪ್ರವಾಸೋದ್ಯಮ ಡಿಸೆಂಬರ್ ಮಾಸಾಂತ್ಯದ ವೇಳೆಗೆ ಚೇತರಿಕೆ ಕಂಡು ಬರುತ್ತಿದೆ. ಕ್ರಿಸ್‌ಮಸ್ ರಜೆ ಆರಂಭ ಆಗುತ್ತಿದಂತೆಯೇ ಜಿಲ್ಲೆಯ ಕಡೆಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸಾಕಾನೆ ಶಿಬಿರಕ್ಕೆ ಹೆಸರಾದ ದುಬಾರೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಜಿಲ್ಲೆಯ ಗಡಿಯಲ್ಲಿರುವ ಟಿಬೆಟಿಯನ್ ಗೋಲ್ಡನ್ ಟೆಂಪಲ್, ಮಡಿಕೇರಿ ರಾಜಾಸೀಟ್, ತಲಕಾವೇರಿ, ಭಾಗಮಂಡಲ ಸೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶನಿವಾರದಿಂದಲೇ ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದ್ದು, ಪ್ರವಾಸೋದ್ಯಮಿಗಳ ಮುಖದಲ್ಲಿ ಮತ್ತೆ ನಗು ಕಾಣಿಸಿಕೊಂಡಿದೆ.
ಕೊಡಗು ಪ್ರಕೃತಿ ಸೌಂದರ್ಯದಲ್ಲಿ ಕರ್ನಾಟಕದ ಕಾಶ್ಮೀರದಂತಿದೆ. ಇತ್ತೀಚಿಗೆ ಕೊಡಗಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜಂಜಾಟದಲ್ಲಿದ್ದವರು ಇಲ್ಲಿನ ನಿಸರ್ಗ ರಮಣೀಯ ಸ್ಥಳಗಳಲ್ಲಿ ಒಂದಷ್ಟು ಸಮಯವನ್ನು ಕಳೆಯಲೆಂದೇ ಜನ ಇತ್ತ ಮುಖ ಮಾಡುತ್ತಿದ್ದಾರೆ. ಇಲ್ಲಿರುವ ಬಹುತೇಕ ಪ್ರವಾಸಿ ತಾಣಗಳು ನಿಸರ್ಗ ನಿರ್ಮಿತವಾಗಿರುವುದರಿಂದ ಸದಾ ಪ್ರಶಾಂತತೆ ನೆಲೆಸಿರುತ್ತದೆ. ಹೀಗಾಗಿಯೇ ಬಹುತೇಕ ಪ್ರವಾಸಿಗರಿಗೆ ಕೊಡಗು ಇಷ್ಟವಾಗುತ್ತಿದೆ.
ಬೆಟ್ಟ- ಗುಡ್ಡಗಳು, ಜಲಪಾತಗಳು, ಕಾಫಿ ತೋಟಗಳು ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆ ಶಾಲಾ - ಕಾಲೇಜು, ಸಾಫ್ಟ್‌ವೇರ್ ಉದ್ಯಮ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಸರಣಿ ರಜೆ ಆರಂಭವಾಗಲಿದೆ. ಹೀಗಾಗಿ ಅತಿ ಹೆಚ್ಚು ಮಂದಿ ಕೊಡಗು ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ಇದರಿಂದ ಡಿ.24 ರಿಂದ ಜ.10 ರವರೆಗೆ ಜಿಲ್ಲೆಯ ಬಹುತೇಕ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್‌ಗಳು ಈಗಾಗಲೇ ಭರ್ತಿಯಾಗಿವೆ.
ಕ್ರಿಸ್‌ಮಸ್ ಮತ್ತು ನ್ಯೂ ಇಯರ್ ಆಸುಪಾಸಿನ ದಿನಗಳಂತೂ ಬೇರೆ ಯಾವುದೋ ಕೆಲಸಕ್ಕಾಗಿ ಜಿಲ್ಲೆಗೆ ಬರುವವರಿಗೂ ರೂಂಗಳು ಸಿಗದಂತಹ ವಾತಾವರಣ ನಿರ್ಮಾಣವಾಗಲಿದೆ. ವರ್ಷಾಂತ್ಯದ ದಿನಗಳಲ್ಲಿ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್‌ಗಳಲ್ಲಿನ ಎಲ್ಲ ರೂಂಗಳನ್ನೂ ಈಗಾಗಲೇ ಕಾಯ್ದಿರಿಸಲ್ಪಟ್ಟಿದ್ದು, ಮಧ್ಯಮ ಮತ್ತು ಸಾಧಾರಣ ಹೊಂ ಸ್ಟೇ, ಲಾಡ್ಜ್, ಹೋಟೆಲ್‌ಗಳಲ್ಲಿ ಮಾತ್ರ ಕೊಠಡಿಗಳು ಲಭ್ಯವಿದೆ. ಆನ್‌ಲೈನ್ ಮತ್ತು ಟೆಲಿಫೋನ್ ಮೂಲಕ ಸಾಕಷ್ಟು ವಿಚಾರಣೆಗಳು ಬರುತ್ತಿದ್ದು, ತಮ್ಮ ದರಕ್ಕೆ ಹೊಂದಾಣಿಕೆಯಾಗುವವರ ಬುಕ್ಕಿಂಗ್ ಸ್ವೀಕರಿಸುವಲ್ಲಿ ಹೋಟೆಲ್, ಲಾಡ್ಜ್ ಸಿಬ್ಬಂದಿ ನಿರತರಾಗಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿದ್ದು, ಹೀಗೆ ಬರುವ ಪ್ರವಾಸಿಗರು ಮಡಿಕೇರಿಯಲ್ಲಿರುವ ರಾಜಾಸೀಟ್‌ಗೆ ಲಗ್ಗೆ ಇಡುತ್ತಿದ್ದು, ಪ್ರಶಾಂತ ಸ್ಥಳದಲ್ಲಿ ನಿಸರ್ಗ ಸೌಂದರ್ಯ ಸವಿದು ತಮ್ಮೂರ ಹಾದಿ ಹಿಡಿಯುತ್ತಿದ್ದರು. ಆದರೆ ಇನ್ಮುಂದೆ ಪ್ರವಾಸಿಗರು ಇಲ್ಲಿ ಒಂದಷ್ಟು ಕಸರತ್ತು ಮಾಡಿ ಹೊಸ ಅನುಭವ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ಚಾರಣಕ್ಕೆ ತೆರಳಿದ್ದ ಹರಿಯಾಣ ಮೂಲದ ಯುವಕ ಹೃದಯಘಾತದಿಂದ ನಿಧನ