ಕೊಡಗು: ಕೊಡಗಿನಲ್ಲಿ ಮುಂಗಾರು ಆರ್ಭಟ ಹೆಚ್ಚಾಗಿದ್ದು ಗಾಳಿ-ಮಳೆಗೆ ಮನೆ ಕುಸಿದು ಬಿದ್ದಿರುವ ಘಟನೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರಿನ ಗ್ರಾಮದಲ್ಲಿ ನಡೆದಿದೆ. ಮನೆ ಕುಸಿದ ವೇಳೆ ಒಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಮಳೆ ತೀವ್ರಗೊಂಡಿದೆ.
ಗ್ರಾಮದ ಪಿ.ಟಿ. ಪಾರ್ವತಿ ಎಂಬವರು ಈ ಮನೆಯಲ್ಲಿ ವಾಸವಿದ್ದರು. ಲಾಕ್ಡೌನ್ ಇದ್ದ ಕಾರಣ ತನ್ನ ಮಗಳ ಮನೆಗೆ ಹೋಗಿದ್ದರು. ಭಾರಿ ಮಳೆ-ಗಾಳಿಗೆ ಹೆಂಚುಗಳು ಹಾರಿಹೋಗಿವೆ. ಸತತ ಮಳೆ ಬೀಳುತ್ತಿರುವ ಕಾರಣ ಗೋಡೆಗಳು ಕುಸಿದು ಬಿದ್ದಿವೆ.
![KN_mdk_mane kusita](https://etvbharatimages.akamaized.net/etvbharat/prod-images/kn-mdk-manekusita_16062021202047_1606f_1623855047_179.jpg)
ಘಟನೆ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಪಾಯವಿರುವ ಸ್ಥಳಗಳಿಂದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೆ. ಕಾವೇರಿ ತೀರ ಪ್ರದೇಶ ಮತ್ತು ಕಳೆದ ಬಾರಿ ಅನಾಹುತ ಸಂಭವಿಸಿದ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.