ಮಡಿಕೇರಿ: ವಿದೇಶಿ ಪ್ರಜೆವೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.
ಸ್ಪೇನ್ ದೇಶದ ಕಾರ್ಲೋಸ್ (65) ಮೃತ ವ್ಯಕ್ತಿ. ಸೋಮೇಶ್ವರ ಬಡಾವಣೆಯ ಐಟಿಐ ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಕಳೆದ ಎಂಟು ತಿಂಗಳಿನಿಂದ ಬಾಡಿಗೆ ಇದ್ದ ಇವರು, ಅಡುಗೆ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ನೆರೆಮನೆಯವರಿಗೆ ಮೃತದೇಹದ ದುರ್ವಾಸನೆ ಬಂದಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆಗ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸ್ಪೇನ್ ದೇಶದ ನೌಕಾಪಡೆಯ ನಿವೃತ್ತ ಯೋಧನಾಗಿರುವ ಕಾರ್ಲೋಸ್ ಅವರು ಮೂವರು ಮಕ್ಕಳನ್ನು ಹೊಂದಿದ್ದಾರೆ. ಇವರು 2003ರಲ್ಲಿ ಕೇರಳದಲ್ಲಿ ವಾಸವಿದ್ದರು. ನಂತರ ಕುಶಾಲನಗರಕ್ಕೆ 2008ರಲ್ಲಿ ಆಗಮಿಸಿದ್ದರು. ಟಿಬೇಟ್ ಕ್ಯಾಂಪ್ನಲ್ಲಿ ಗಿಟಾರ್ ನುಡಿಸುತ್ತ ಹಣ ಸಂಪಾದನೆ ಮಾಡುತ್ತಿದ್ದರು. ಜೊತೆಗೆ ಇವರಿಗೆ ಬರುತ್ತಿದ್ದ ಪಿಂಚಣಿ ಹಣವನ್ನು ಬಳಸಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಹಾಗೂ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಲೋಸ್ ಎಲ್ಲಾ ಕಡೆ ದಿನವಿಡೀ ಪಾನಮತ್ತನಾಗಿಯೇ ತಿರುಗುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತ ಕಾರ್ಲೋಸ್ ಮಲಗಿದ್ದ ಹಾಸಿಗೆಯಿಂದ ರಕ್ತ ಹರಿದಿರುವ ಕಲೆಗಳು ಕಾಣಿಸಿಕೊಂಡಿವೆ. ಇದನ್ನು ಕಂಡ ಕೆಲವರು, ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನಲೆ ದೇಹದಿಂದ ರಕ್ತ ಹೊರ ಬಂದಿದೆ ಎಂದರೆ, ಇನ್ನೂ ಕೆಲವರು ಕೊಲೆ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಕಾರ್ಲೋಸ್ ಅವರ ಸಾವು ಸಹಜವೋ, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.