ಕೊಡಗು: ಪುರಾತನ ಕಾಲದ ಪಂಚಲೋಹ, ಕಂಚಿನ ವಿಗ್ರಹಗಳು ಹಾಗೂ ಕೃಷಿ ಉಪಕರಣಗಳು ಸೇರಿದಂತೆ ಕಳ್ಳತನ ಮಾಡಿದ್ದ 10 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಆರೋಪಿಗಳಾದ ಲವ, ಮಂಜ, ರೋಹಿತ್ ಎಂಬುವರನ್ನು ಬಂಧಿಸಿದ್ದು, ಸುಮಾರು 10,20,000 ರೂ. ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 2020ರಲ್ಲಿ ಮಡಿಕೇರಿಯ ವಿವಿಧ ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದರು. ಮಡಿಕೇರಿ ಸಮೀಪದ ಕರ್ಣಗೇರಿ ಗ್ರಾಮದ ಮನೆಯೊಂದರಲ್ಲಿ 6.5 ಲಕ್ಷ ಮೌಲ್ಯದ ಪುರಾತನ ಪಂಚಲೋಹ ಮತ್ತು ಕಂಚಿನ ವಿಗ್ರಹಗಳ ಕಳ್ಳತನವಾಗಿದ್ದವು.
ಹಾಗೆಯೇ, ಕಗ್ಗೋಡ್ಲು ಗ್ರಾಮದಲ್ಲಿ ಕೃಷಿ ಚಟುವಟಿಕೆಗೆ ಬಳಸುವ ಸುಮಾರು 3 ಲಕ್ಷ ಮೌಲ್ಯದ ಯಂತ್ರೋಪಕರಣಗಳು, 20 ಸಾವಿರ ರೂ ಮೌಲ್ಯದ ಕಾಫಿ ಬೀಜಗಳನ್ನು ಕಳ್ಳರು ಕದ್ದೊಯ್ದಿದ್ದರು. ಕಳ್ಳರಿಂದ ಸುಮಾರು 10,20,000 ರೂ. ಬೆಲೆಬಾಳುವ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಎಸ್ಪಿ ಕ್ಷಮಾ ಮಿಶ್ರ ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಜೇಂದ್ರ, ಮಡಿಕೇರಿ ಗ್ರಾಮಾಂತರ ಠಾಣಾ ನಿರೀಕ್ಷಕರಾದ ರವಿಕಿರಣ್, ಪಿಎಸ್ಐ ಸದಾಶಿವ ಸೇರಿದಂತೆ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ: ಲಖೀಂಪುರ ಖೇರಿ ಹಿಂಸಾಚಾರ: ಸಚಿವ ಅಜಯ್ ಮಿಶ್ರಾ, ಪುತ್ರ ಆಶೀಶ್ ಮಿಶ್ರಾ ಹೇಳಿದ್ದೇನು?