ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ರಸೂಲ್ಪುರ ಬಾಳುಗೋಡಿನಲ್ಲಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಹತ್ತು ತಿಂಗಳ ಗರ್ಭಿಣಿ ಆನೆಯೊಂದನ್ನು ತಡರಾತ್ರಿ ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಂದಾಜು 20 ವರ್ಷದ ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದ್ದು, ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೇಬರದ ಮರಣೋತ್ತರ ಪರೀಕ್ಷೆ ನಡೆದಿದ್ದು, ಗರ್ಭದಲ್ಲಿದ್ದ ಮರಿಯಾನೆ ಕೂಡಾ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ರಸೂಲ್ಪುರ, ಬಾಳುಗೋಡು, ದುಬಾರೆ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಆಹಾರ ಅರಸಿ ನಾಡಿಗೆ ಬಂದ ಸಲಗಗಳು ತೋಟಕ್ಕೆ ನುಗ್ಗಿ ದಾಂಧಲೆ ಮಾಡುತ್ತಿವೆ. ರಸ್ತೆಯಲ್ಲಿ ಒಡಾಡುವ ಜನರ ಮೇಲೂ ದಾಳಿ ಮಾಡಿದ ಘಟನೆಗಳು ಜರುಗಿವೆ. ಈ ಭಾಗದಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿರುವುದರಿಂದ ಪ್ರತಿ ರಾತ್ರಿ ಆನೆಗಳು ಕಾಡಿನಿಂದ ನಾಡಿಗೆ ಬರುತ್ತವೆ. ಇದಕ್ಕಾಗಿ ರೈತರು, ಅರಣ್ಯ ಇಲಾಖೆ ಕಾಡಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಿದ್ದಾರೆ. ಆದರೆ ಈ ಬೇಲಿ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಕಾಡಾನೆಗಳು ಸುಲಭವಾಗಿ ರೈತರ ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ಹಾಗಾಗಿಯೇ, ರಾತ್ರಿ ಕಾಫಿ ತೋಟಕ್ಕೆ ನುಗ್ಗಿದ ಆನೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆನೆ ಬಲಿಯಾಗಿರುವ ಸ್ಥಳಕ್ಕೆ ಆರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ಕಡೆಗಳಲ್ಲಿ ಮನುಷ್ಯರ ಮೇಲೆ ದಾಳಿ ನಡೆಯುತ್ತಿದೆ. ಇನ್ನೂ ಕೆಲವು ಭಾಗದಲ್ಲಿ ಕಾಡು ಪ್ರಾಣಿಗಳೂ ಪ್ರಾಣ ಕಳೆದುಕೊಳ್ಳುತ್ತಿವೆ.
ಇದನ್ನೂ ಓದಿ : ಬಾಯಾರಿಕೆ.. ದೇವಸ್ಥಾನದಲ್ಲಿ ಕೈ ಪಂಪ್ ಒತ್ತಿ ನೀರು ಕುಡಿದ ಕಾಡಾನೆ: ವೈರಲ್ ವಿಡಿಯೋ
ಕಾಡಾನೆ ವೈರಲ್ ವಿಡಿಯೋ: ಕಳೆದ ಏಪ್ರಿಲ್ ತಿಂಗಳ 28 ರಂದು ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಕಾಡಾನೆಯೊಂದು ಸೊಂಡಿಲಿನ ಮೂಲಕ ಕೈ ಪಂಪ್ ಒತ್ತಿ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಲ್ಲಿನ ಕೊಮರಡ ಮಂಡಲದ ವನ್ನಂ ಗ್ರಾಮದ ದೇವಸ್ಥಾನವೊಂದರ ಆವರಣದಲ್ಲಿ ಘಟನೆ ನಡೆದಿದೆ. ಕಾಡಾನೆಯನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದರು. ಆನೆ ತನ್ನ ಸೊಂಡಿಲಿನ ಸಹಾಯದಿಂದ ಕೈ ಪಂಪ್ ಒತ್ತುತ್ತದೆ. ನೀರು ಬಂದ ನಂತರ ಅದನ್ನು ಕುಡಿಯುತ್ತದೆ. ಸುಮಾರು ಬಾರಿ ಹೀಗೆ ಮಾಡಿ ಆನೆಯ ತನ್ನ ಬಾಯಾರಿಕೆ ನೀಗಿಸಿಕೊಂಡಿತ್ತು.
ಇದನ್ನೂ ಓದಿ : ನಾಗರಹೊಳೆ ಬಂಡೀಪುರದಲ್ಲಿ ಇಂದಿನಿಂದ ಆನೆ ಗಣತಿ... ದಕ್ಷಿಣ ಭಾರತದ 7 ರಾಜ್ಯಗಳ ಗಣತಿ ನೇತೃತ್ವ ವಹಿಸಿರುವ ಅರಣ್ಯ ಇಲಾಖೆ
ಆನೆಗಳ ಗಣತಿ : ದಕ್ಷಿಣ ಭಾರತದ 7 ರಾಜ್ಯಗಳಲ್ಲಿ ಮೇ 17 ರಿಂದ ಮೂರು ದಿನಗಳ ಕಾಲ 5 ವರ್ಷಕ್ಕೊಮ್ಮೆ ನಡೆಯಲಿರುವ ಆನೆಗಳ ಗಣತಿ ನಡೆಸಲಾಯಿತು. ಕರ್ನಾಟಕದ ನಾಗರಹೊಳೆ - ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿಯೂ ಏಕಕಾಲಕ್ಕೆ ಆನೆಗಳ ಗಣತಿ ನಡೆಸಲಾಯಿತು. ಕರ್ನಾಟಕದ ಆನೆಗಳು ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಭಾಗಗಳಲ್ಲಿ ಓಡಾಡುವ ಕಾರಣದಿಂದ ಕರ್ನಾಟಕ ಅರಣ್ಯ ಇಲಾಖೆಯು ಆನೆಗಳ ಗಣತಿಯ ನೇತೃತ್ವ ವಹಿಸಿತ್ತು.
ರಾಜ್ಯವಾರು ಆನೆಗಳ ಸಂಖ್ಯೆ: ದೇಶದಲ್ಲಿಯೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಕರ್ನಾಟಕವಾಗಿದೆ. 2017 ರ ಆನೆ ಗಣತಿಯಲ್ಲಿ ಕರ್ನಾಟಕದಲ್ಲಿ 6,049 ಆನೆಗಳಿದ್ದು, ಅಸ್ಸಾಂನಲ್ಲಿ 5,719, ಕೇರಳದಲ್ಲಿ 3,504 ಆನೆಗಳಿವೆ ಎಂದು ತಿಳಿದುಬಂದಿತ್ತು.