ಕಲಬುರಗಿ : ಹೋಳಿ ಹಬ್ಬದ ಹಿನ್ನೆಲೆ ಕಾಮದಹನಕ್ಕಾಗಿ ಬೆಂಕಿ ಕಿಡಿ ತೆಗೆದುಕೊಂಡು ಹೋಗುವ ವಿಚಾರಕ್ಕೆ ಗಲಾಟೆ ನಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ. ರವಿಕುಮಾರ ಓಚರ್ (25) ಮೃತ ಯುವಕ ಎಂದು ಗುರುತಿಸಲಾಗಿದೆ.
ಹೋಳಿ ಹಬ್ಬದ ಪ್ರಯುಕ್ತ ಲಾಡ್ಲಾಪುರದ ಗ್ರಾಮದೇವತೆ ಮರೆಗಮ್ಮ ದೇವಸ್ಥಾನದ ಆವರಣದಿಂದ ಬೆಂಕಿ ಕಿಡಿ ತೆಗೆದುಕೊಂಡು ಹೋಗಿ ತಮ್ಮ ತಮ್ಮ ಬಡಾವಣೆಗಳಲ್ಲಿ ಕಾಮಗಳ ದಹನ ಮಾಡುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಂಗಳವಾರ ಸಂಜೆ ಬೆಂಕಿ ಕಿಡಿ ತೆಗೆದುಕೊಂಡು ಹೋಗುವ ಸಂದರ್ಭ ಕೆಲವರ ಮಧ್ಯೆ ವಾಗ್ವಾದ ಶುರುವಾಗಿತ್ತು. ಈ ವಾಗ್ವಾದದ ನಡುವೆ ರವಿಕುಮಾರನನ್ನು ತಳ್ಳಲಾಗಿದ್ದು, ನೆಲಕ್ಕೆ ಬಿದ್ದ ರವಿಯ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲೆಯಲ್ಲಿ ಕಳೆಗಟ್ಟಿದ ಹೋಳಿ ಹಬ್ಬ : ದೇಶಾದ್ಯಂತ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಕಲಬುರಗಿ ಜಿಲ್ಲೆಯಲ್ಲೂ ರಂಗು ರಂಗಿನ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಂಗಳವಾರ ರಾತ್ರಿ ಕಾಮದಹನ ಹಾಗೂ ಬುಧವಾರ ಬಣ್ಣದ ಓಕುಳಿಯನ್ನು ಆಡುವ ಮೂಲಕ ಎರಡು ದಿನ ಬಣ್ಣದಲ್ಲಿ ಜನರು ಮಿಂದೆದ್ದರು.
ರಂಗಿನಲ್ಲಿ ಮಿಂದೆದ್ದ ಯುವ ಸಮೂಹ : ಜಿಲ್ಲೆಯಾದ್ಯಂತ ಬುಧವಾರ ಬೆಳಗ್ಗೆಯಿಂದಲೇ ಎಲ್ಲರೂ ಹೋಳಿ ಹಬ್ಬವನ್ನು ಆಚರಿಸಿದರು. ನಗರದ ನಿವಾಸಿಗಳು ತರಹೇವಾರಿ ಬಣ್ಣಗಳನ್ನು ಪರಸ್ಪರ ಎರಚಿ ಸಂಭ್ರಮಿಸಿದರು. ಮಕ್ಕಳು ಪಿಚಕಾರಿ ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಹೋಳಿ ಚಿಮ್ಮಿದರು. ಯುವಕ ಯುವತಿಯರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳ ಮನೆಗೆ ತೆರಳಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.
ಇನ್ನು, ಮಧ್ಯಾಹ್ನದ ಹೊತ್ತಿಗೆ ಎತ್ತರಕ್ಕೆ ಗಡಿಗೆಗಳನ್ನು ಕಟ್ಟಿ ಹಾಡುತ್ತ ಕುಣಿಯುತ್ತ ಒಬ್ಬರ ಮೇಲೊಬ್ಬರು ನಿಂತು ಗಡಿಗೆ ಒಡೆದರು. ಎಲ್ಲೆಡೆ ಜನರು ಬಣ್ಣಗಳಲ್ಲಿ ಮುಳುಗಿರುವ ದೃಶ್ಯಗಳು ಕಂಡುಬಂದವು. ನಗರದ ರೋಟರಿ ಶಾಲೆಯಲ್ಲಿ ಮಹಿಳೆಯರೂ ಕೂಡ ರಂಗನ್ನು ಪರಸ್ಪರ ಎರಚಿಕೊಂಡು ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ಹೊನ್ನಕಿರಣಗಿ ಗ್ರಾಮದಲ್ಲಿ ಮಂಗಳವಾರ ಇಡೀ ರಾತ್ರಿ ಜಾನಪದ ಹಾಡುಗಳನ್ನು ಹಾಡುತ್ತ ವಿಶಿಷ್ಟವಾಗಿ ಹೋಳಿ ಹಬ್ಬ ಆಚರಿಸಲಾಯಿತು.
ಮಹಿಳೆಯರಿಗಾಗಿ ರಂಗದೇ ಕಾರ್ಯಕ್ರಮ ಆಯೋಜನೆ: ಕಲಬುರಗಿ ನಗರದ ಜಿ ಆರ್ ಕಾಲೋನಿಯಲ್ಲಿ ಮಹಿಳೆಯರಿಗಾಗಿ ವಿಶೇಷ 'ರಂಗದೇ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 7 ಗಂಟೆಯಿಂದಲೇ ರಂಗು ರಂಗಿನ ಬಣ್ಣದಾಟ ಪ್ರಾರಂಭವಾಗಿತ್ತು. ಯುವತಿಯರು, ಮಹಿಳೆಯರು ಬಣ್ಣ ಹಚ್ಚಿ ಸಕತ್ ಸ್ಟೆಪ್ ಹಾಕಿದರು. ಡಿಜೆ ಹಾಡಿನ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮ ಸಡಗರದಿಂದ ಹೋಳಿ ಆಚರಣೆ ಮಾಡಿದರು.
ಇದನ್ನೂ ಓದಿ : ಆನೆಗೊಂದಿ, ಅಂಜನಾದ್ರಿಯಲ್ಲಿ ವಿದೇಶಿಗರಿಂದ ಸಂಭ್ರಮದ ಬಣ್ಣದೋಕುಳಿ