ಕಲಬುರಗಿ: ಯುವಕನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಹಳೇ ಜೇವರ್ಗಿ ರಸ್ತೆಯಲ್ಲಿರುವ ಪಿಎನ್‌ಟಿ ಕ್ರಾಸ್ ಹತ್ತಿರ ನಡೆದಿದ್ದು, ಹಂತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾನುವಾರ ನಗರದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಜಮೀರ್ (23) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಮೀರ್ ತನ್ನ ಬೈಕ್ನಲ್ಲಿ ಹೊರಟಿದ್ದ ವೇಳೆ ಬೆನ್ನಟ್ಟಿದ ಇಬ್ಬರು ಹಂತಕರು ಜೀವನಪ್ರಕಾಶ ಶಾಲೆ ಬಳಿ ಅಡ್ಡಗಟ್ಟಿ ನೋಡನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹತ್ತಾರು ಬಾರಿ ಕೊಚ್ಚಿ ಪರಾರಿಯಾಗಿದ್ದರು.
ಕೊಲೆ ಹಿಂದಿದೆ ಲವ್ ಕಹಾನಿ?: ಜಮೀರ್ ಕೊಲೆ ಹಿಂದೆ ಲವ್ ಕಹಾನಿಯೊಂದು ಇದೆ ಎನ್ನಲಾಗ್ತಿದೆ. ಮನೆ ಹತ್ತಿರದಲ್ಲೇ ವಾಸವಿದ್ದ ಯುವತಿ ಮತ್ತು ಜಮೀರ್ ಪರಸ್ಪರ ಪ್ರೀತಿ ಮಾಡುತ್ತಿದ್ದರಂತೆ. ಈ ವಿಷಯ ಯುವತಿ ಪೋಷಕರಿಗೆ ಗೊತ್ತಾಗಿ ವಾರ್ನಿಂಗ್ ಕೂಡ ನೀಡಿದ್ದರಂತೆ. ಆದರೂ ಪ್ರೀತಿ ಮುಂದುವರೆದಾಗ ಬೇಸರಗೊಂಡ ಯುವತಿ ಪೋಷಕರು ಬೇರೆ ಬಡಾವಣೆಗೆ ಶಿಫ್ಟ್ ಆಗಿದ್ದರು.
ಇದನ್ನೂ ಓದಿ: ಕಲಬುರಗಿ: ಬೈಕ್ನಲ್ಲಿ ಹೊರಟ ಯುವಕನ ಬೆನ್ನಟ್ಟಿ ಕೊಚ್ಚಿ ಕೊಲೆಗೈದ ಹಂತಕರು
ಇಷ್ಟಾದರೂ, ಇಬ್ಬರ ನಡುವಿನ ಪ್ರೀತಿ ಮುಂದುವರೆದು ಭೇಟಿಯಾಗುತ್ತಿದ್ದರು. ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗ್ತಿದೆ. ಇನ್ನೊಂದೆಡೆ, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತರೇ ಜಮೀರ್ ಕೊಲೆ ಮಾಡಿದ್ದಾರೆ ಎಂದೂ ಸಹ ಶಂಕಿಸಲಾಗುತ್ತಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.