ಕಲಬುರಗಿ: ಬೆಲೆ ಏರಿಕೆಯ ನಡುವೆಯೂ ಜಿಲ್ಲೆಯ ರೈತರು ಹೊಲದಲ್ಲಿ ಚರಗ ಚೆಲ್ಲಿ ಸಾಂಪ್ರದಾಯಿಕವಾಗಿ ಎಳ್ಳು ಅಮಾವಾಸ್ಯೆಯನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ರೈತರು ಸಸ್ಯ ಮತ್ತು ಭೂತಾಯಿಯನ್ನು ಆರಾಧಿಸುವ, ಗೌರವಿಸುವ ವಿಶೇಷ ಹಬ್ಬಗಳಲ್ಲಿ ಎಳ್ಳು ಅಮಾವಾಸ್ಯೆ ಕೂಡ ಒಂದು. ಇದು ಸ್ನೇಹ ಹಾಗೂ ಸೌಹಾರ್ದದ ಸಂಕೇತವಾಗಿದೆ. ಈ ದಿನ ಕುಟುಂಬ ಸಮೇತವಾಗಿ ಹೊಲಗಳಿಗೆ ತೆರಳಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಪಾಂಡವರಿಗೆ ಮತ್ತು ಲಕ್ಷ್ಮಿಗೆ ವಿವಿಧ ಭಕ್ಷ್ಯಗಳ ನೈವೇದ್ಯವನ್ನು ಅರ್ಪಿಸುವುದು ಪ್ರತೀತಿ.
ಹಬ್ಬದ ಮುನ್ನಾ ದಿನ ಮಹಿಳೆಯರು ಮಾಗಿ ಚಳಿಗೆ ತಕ್ಕಂತೆ ಸಾಂಪ್ರದಾಯಕವಾಗಿ ಹಬ್ಬದೂಟವನ್ನು ಸಿದ್ಧಪಡಿಸಿಸುತ್ತಾರೆ. ತರಕಾರಿಗಳ್ನು ಬಳಸಿ ಭಜ್ಜಿ, ಪಲ್ಯೆ ಮಾಡುತ್ತಾರೆ. ಇದರೊಂದಿಗೆ ಸಜ್ಜೆ, ಜೋಳದ ರೊಟ್ಟಿ, ಶೇಂಗಾ, ಅಗಸಿ ಚಟ್ನಿ, ಎಣ್ಣೆಗಾಯಿ, ಜೋಳದ ಅನ್ನ, ಅಂಬಲಿ, ಬೆಲ್ಲದ ಕರಚಿಕಾಯಿ, ಸಜ್ಜೆ ಮತ್ತು ಜೋಳದ ಕಡಬು, ಶೇಂಗಾ ಹೂರಣ ಹೋಳಿಗೆ ಹೀಗೆ ವಿವಿಧ ಬಗೆಯ ಆಹಾರಗಳನ್ನು ತಯಾರಿಸುತ್ತಾರೆ.
ಹಬ್ಬದ ದಿನವಾದ ಇಂದು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತರು ನಸುಕಿನ ಜಾವ ಹೊಲಕ್ಕೆ ಹೋಗಿ ಭೂ ತಾಯಿಗೆ ಚರಗ ಚೆಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ನೆರೆ-ಹೊರೆಯವರೊಂದಿಗೆ ಹೊಲದಲ್ಲಿ ಸಾಮೂಹಿಕ ಹಬ್ಬದೂಟ ಸವಿದು ಸಂಭ್ರಮಿಸಿದರು.
ನಗರದ ಜನರಲ್ಲೂ ಸಂಭ್ರಮ:
ಗ್ರಾಮೀಣ ಭಾಗದ ಜನ ಹೊಲಗಳಿಗೆ ಹೋಗಿ ಚರಗ ಚೆಲ್ಲಿ ಎಳ್ಳಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರೆ, ಇತ್ತ ನಗರ ನಿವಾಸಿಗಳು ಕುಟುಂಬ ಸಮೇತರಾಗಿ ಉದ್ಯಾನಗಳಿಗೆ ತೆರಳಿ ಮನೆಯಲ್ಲಿ ಮಾಡಿಕೊಂಡು ಬಂದಿದ್ದ ಅಡುಗೆಯನ್ನು ಸವಿದರು. ಲಾಕ್ಡೌನ್ನಿಂದಾಗಿ ಎರಡು ವರ್ಷಗಳ ಕಾಲ ಹಬ್ಬ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ವರ್ಷ ಅತ್ಯಂತ ಸಡಗರದಿಂದ ಹಬ್ಬವನ್ನು ಆಚರಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಸಾಫ್ಟವೇರ್ ಉದ್ಯೋಗಿ, ಬಾಗಲಕೋಟೆಯಲ್ಲಿ ರೈತ.. ಮಿಶ್ರ ಬೆಳೆಯಲ್ಲಿ ಯಶೋಗಾಥೆ