ಕಲಬುರಗಿ: ಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಾರ್ಮಿಕ ಇಲಾಖೆಯಿಂದ 15ಕ್ಕಿಂತ ಅಧಿಕ ಸೇವೆಗಳನ್ನು ಕಾರ್ಮಿಕರಿಗೆ ಸಕಾಲದಲ್ಲಿ ಒದಗಿಸುವ ಯೋಜನೆಯೇ ಸೇವಾ ಸಿಂಧು ಯೋಜನೆಯಾಗಿದೆ. ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಿಂಧು ಯೋಜನೆಯಡಿಯಲ್ಲಿ ಕಾರ್ಮಿಕ ಇಲಾಖೆಯ ಆನ್‌ಲೈನ್ ಸೇವೆಗಳ ಕುರಿತು ಕಂಪ್ಯೂಟರ್ ಅಪರೇಟರ್‌ಗಳಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಬಿ. ಶರಣಪ್ಪ ಸತ್ಯಂಪೇಟೆ ಮಾತನಾಡಿದರು. ಟ್ರೈನಿಂಗ್ ಕಮ್ ಟೂಲ್ ಕಿಟ್, ವಸತಿ, ಹೆರಿಗೆ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಸೇರಿದಂತೆ ಹಲವು ಸೌಕರ್ಯಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ.
ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರದ ಹಲವಾರು ಯೋಜನೆಗಳ ಕುರಿತು ಕಾರ್ಮಿಕ ಇಲಾಖೆ ಅರಿವು ಮೂಡಿಸಬೇಕು ಎಂದರು. ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಶಿಷ್ಟಾಚಾರ ತಹಶಿಲ್ದಾರ್ ಪ್ರಕಾಶ್ ಚಿಂಚೋಳಿಕರ ಮತ್ತಿತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.