ಕಲಬುರಗಿ: ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಚಲಿಸುವ ರೈಲಿನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಸೈದಾಪುರ ಗ್ರಾಮದ ನಿವಾಸಿ ಗೀತಾ ರೈಲಿನಲ್ಲಿ ಜನ್ಮ ನೀಡಿದ ತಾಯಿ. ಗೀತಾ ಬೀದರ್-ಯಶವಂತಪುರ ರೈಲಿನಲ್ಲಿ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಬೋಗಿಯಲ್ಲಿದ್ದ ಚಿತ್ತಾಪುರ ತಾಲೂಕಿನ ನಾಲವಾರ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ ಹಾಗೂ ಹಾಲಾಬಾಯಿ ಇಬ್ಬರು ಸೇರಿ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ನಂತರ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.