ಕಲಬುರಗಿ: ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಕಾರಣಳಾದ ಮಹಿಳೆಗೆ 5 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ಕಲಬುರಗಿಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಗಣೇಶ ನಗರದ ನಿವಾಸಿ ಅನಿತಾ ಅಲಿಯಾಸ್ ಅನ್ನಪೂರ್ಣ ಡೊಂಗರಗಾಂವ ಶಿಕ್ಷೆಗೆ ಗುರಿಯಾದವರು. ನಾಗರಾಜ ಸಮಾಳ ಎಂಬುವರ ಆತ್ಮಹತ್ಯೆಗೆ ಅನಿತಾ ಕಾರಣ ಎಂದು ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ತೀರ್ಪು ನೀಡಿದ್ದಾರೆ.
ನಾಗರಾಜನ ಜೊತೆ ಅನಿತಾ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ನಾಗರಾಜನ ಕುಟುಂಬಸ್ಥರಿಗೆ ತಿಳಿದು ಗಲಾಟೆ ನಡೆದಿತ್ತು. ಅವರ ಮನೆಯವರೊಂದಿಗೆ ಅನಿತಾ ಕೂಡಾ ಗಲಾಟೆ ಮಾಡಿದ್ದಳು. ನಾಗರಾಜ ನನ್ನ ಜೊತೆ ಬಂದು ಸಂಸಾರ ಮಾಡಬೇಕು, ಇಲ್ಲದಿದ್ದರೆ ಅದು ಹೇಗೆ ಜೀವನ ನಡೆಸ್ತಾನೆ ನೋಡೋಣ ಎಂದು ಬೆದರಿಕೆ ಕೂಡಾ ಹಾಕಿ ಮಾನಸಿಕ ಹಿಂಸೆ ನೀಡಿದ್ದಳು. ಇದರಿಂದ ಮಾನಸಿಕವಾಗಿ ಕುಗ್ಗಿದ್ದ ನಾಗರಾಜ ಅನಿತಾಳ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತನಿಖೆಯಿಂದ ಗೊತ್ತಾಗಿತ್ತು. ಎಂ.ಬಿ.ನಗರ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಗಂಡನ ಕೊಲೆ ಮಾಡಿಸಿ ಹಸು ತುಳಿದು ಮೃತಪಟ್ಟನೆಂದು ಕಥೆ ಕಟ್ಟಿದ ಪತ್ನಿ!