ಕಲಬುರಗಿ : ಹೈದರಾಬಾದ್ ಕರ್ನಾಟಕ್ಕೆ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮಾರ್ಪಡಿಸಿದ್ದರೂ ಈ ಭಾಗದ ಕಲ್ಯಾಣದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಈ ಭಾಗಕ್ಕೆ ನೀಡುತ್ತಿದ್ದ ವಿಶೇಷ ಅನುದಾನದಲ್ಲಿ ಕಡಿತ ಮಾಡಿದೆ. ನೇರ ನೇಮಕಾತಿಗೂ ಬ್ರೇಕ್ ಹಾಕಿದೆ. ಸಂವಿಧಾನಾತ್ಮಾಕವಾಗಿ ಸಿಕ್ಕ ಹಕ್ಕುಗಳನ್ನು ಕಿತ್ತುಕೊಳ್ಳೋ ಪ್ರಯತ್ನ ನಡೆಸಿದೆ. ಸಂವಿಧಾನದ ಕಲಂ 371 ತಿದ್ದುಪಡಿಯಿಂದ ಸಿಕ್ಕ ವಿಶೇಷ ಸ್ಥಾನಮಾನಕ್ಕೆ ಕೊಕ್ಕೆ ಹಾಕುತ್ತಿದೆ.
ಕೂಡಲೇ ಈ ಭಾಗಕ್ಕೆ ಮೀಸಲಿರೋ ಖಾಲಿ ಹುದ್ದೆ ಭರ್ತಿ ಮಾಡಬೇಕು. ಈ ಭಾಗಕ್ಕೆ ಮೀಸಲಿಟ್ಟ ಅನುದಾನ ಬಿಡುಗಡೆ ಮಾಡಬೇಕು. ಕೊರೊನಾದ ನೆಪ ಹೇಳಿ ಈ ಭಾಗಕ್ಕೆ ಮಲತಾಯಿ ಧೋರಣೆ ತೋರದಿರುವಂತೆ ಆಗ್ರಹಿಸಿದ್ದಾರೆ. ಸಂಸದ ಉಮೇಶ ಜಾಧವ್ ಅಭಿವೃದ್ಧಿಯ ನಾಟಕವಾಡುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ತೋರಿಕೆ ರಾಜಕಾರಣ ಮಾಡುತ್ತಿದ್ದಾರೆ. ಇಬೆಸ್ ಐಸಿ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಟೆಸ್ಟ್ ಲ್ಯಾಬ್ ಕುರಿತು ಮಾತನಾಡುತ್ತಾರೆ. ಲ್ಯಾಬ್ ಆರಂಭಿಸುವ ಇಚ್ಛಾಶಕ್ತಿ ಇದ್ರೆ ಕೇಂದ್ರ ಸಚಿವರನ್ನು ಕರೆಸಿ ವೀಕ್ಷಣೆ ಮಾಡಿಸಲಿ ಅವರೊಂದಿಗೆ ಚರ್ಚಿಸಲಿ. ಸುಮ್ಮನೆ ತೋರಿಕೆ ಭೇಟಿ ನೀಡುವುದು ಬೇಡ ಎಂದು ವ್ಯಂಗ್ಯವಾಡಿದರು.