ಕಲಬುರಗಿ: ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ನೀರು ಹೊರತೆಗೆದ ರೀತಿಯಲ್ಲಿಯೇ ಭೂಮಿಗೆ ನೀರನ್ನು ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಕಲಬುರಗಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಪ್ರಕಾಶ್ ರಾವ್, ತೀವ್ರ ಬರದಿಂದಾಗಿ ಎಲ್ಲೆಡೆ ನೀರಿನ ತತ್ವಾರ ಉಂಟಾಗಿದೆ. ನಾವು ಕೊಳವೆ ಬಾವಿ ಹಾಕಿ ನೀರು ಹೊರ ತೆಗೆಯುವುದರ ಕಡೆಗಷ್ಟೇ ಗಮನ ಹರಿಸುತ್ತಿದ್ದೇವೆ. ಆದರೆ ತೆಗೆದ ಮಾದರಿಯಲ್ಲಿ ಭೂಮಿಗೆ ನೀರುಣಿಸುವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು ರೀಫಿಲ್ಲಿಂಗ್ ಶಾಪ್ಗಳನ್ನು ಮಾಡುತ್ತಿದ್ದೇವೆ. ರೀಫಿಲ್ಲಿಂಗ್ ಶಾಪ್ಗಳು ಅತ್ಯಂತ ಯಶಸ್ವಿಯಾಗಿವೆ. ಅಂತರ್ಜಲಮಟ್ಟ ಹೆಚ್ಚಳಕ್ಕೂ ನಾಂದಿ ಹಾಡಿವೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಿದ್ದಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗುವುದು ನಿಶ್ಚಿತ ಎಂದರು.
ತೆಲಂಗಾಣದಲ್ಲಿ 1,600 ಹಳ್ಳಿಗಳಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ರೀಫಿಲ್ಲಿಂಗ್ ಶಾಪ್ ಮಾಡಲಾಗುತ್ತಿದೆ. ಚೆಕ್ ಡ್ಯಾಂಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ್, ದೇಶದಲ್ಲಿ ನೀರು ಮಾರಾಟದ ದೊಡ್ಡ ಲಾಬಿ ನಡೆದಿದೆ. ದೇಶದಲ್ಲಿ 50 ಸಾವಿರ ಕೋಟಿ ರೂ. ನೀರಿನ ವ್ಯವಹಾರ ನಡೀತಿದೆ. ಮಾನ್ಯತೆ ಇಲ್ಲದ ಅದೆಷ್ಟೋ ಕಂಪನಿಗಳು ಕಾನೂನು ಬಾಹಿರವಾಗಿ ನೀರು ಮಾರಾಟ ಮಾಡುತ್ತಿವೆ. ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ನೀರು ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.