ಕಲಬುರಗಿ: ನಗರದ ಪ್ರಮುಖ ವೃತ್ತ ರಾಮ ಮಂದಿರ ಸರ್ಕಲ್ ಬಳಿಯ ಖಾಲಿ ಸ್ಥಳ ಹಂದಿ, ಬೀದಿ ನಾಯಿಗಳ ವಾಸ ಸ್ಥಳವಾಗಿ ಮಾರ್ಪಟ್ಟಿದೆ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಈ ಸ್ಥಳ ಸದ್ಯ ಕೊಳಚೆ ಪ್ರದೇಶವಾಗಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸುತ್ತಮುತ್ತಲಿನ ಅಂಗಡಿಯವರು, ನಿವಾಸಿಗಳು ಇಲ್ಲಿಯೇ ಕಸ ಚೆಲ್ಲುತ್ತಾರೆ. ಗಲೀಜು ಸ್ಥಳವಾದ್ದರಿಂದ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಕೂಡ ಮಾಡುತ್ತಿದ್ದಾರೆ. ಇಲ್ಲಿನ ದುರ್ವಾಸನೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಹಾಗೂ ದಾರಿ ಹೋಕರರಿಗೆ ವಿಪರೀತ ಕಿರಿಕಿರಿ ಉಂಟಾಗುತ್ತಿದೆ. ಇದರಿಂದ ರೋಗ ರುಜಿನೆಗಳು ಕೂಡ ಹರಡುವ ಸಾಧ್ಯತೆಗಳಿದ್ದು ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೇ ಮರಗಮ್ಮ ದೇವಸ್ಥಾನದ ಪಕ್ಕದಲ್ಲೇ ಈ ರೀತಿ ಗಲೀಜು ಶೇಖರಣೆಗೊಂಡಿರುವುದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮೂಗು ಮುಚ್ಚಿಕೊಂಡೇ ದೇವರ ದರ್ಶನ ಪಡೆಯಬೇಕಾಗಿದೆ. ಈ ಕಾರಣದಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಸಹ ಇಳಿಕೆಯಾಗಿದೆ. ನಿವೇಶನದ ಮಾಲೀಕರಿಗೆ ತಿಳಿಸಿದರೆ ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪಾರ್ಕಿಂಗ್ ಮಾಡಿದ್ದ ಕಾರು, ಜೀಪ್ ಬೆಂಕಿಗಾಹುತಿ