ಕಲಬುರಗಿ: ಮನೆಯಲ್ಲಿ ಯಾರಾದರೂ ಸತ್ತರೆ ಸಂಬಂಧಿಕರಿಗೆ ವಿಷಯ ತಿಳಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅಧಿಕಾರಿಗಳಿಗೆ ಮೊದಲು ವಿಷಯ ಮುಟ್ಟಿಸಿ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡುವಂತೆ ರೋದಿಸಬೇಕಾದ ಶೋಚನೀಯ ಸ್ಥಿತಿ ಬಂದೊದಗಿದೆ.
ಹೌದು, ಕಲಬುರಗಿ ತಾಲೂಕಿನ ನಂದಿಕೂರು ಗ್ರಾಮಸ್ಥರ ಬಹುದಿನದ ಗೋಳಿದು. ಊರಲ್ಲಿ ಯಾರಾದರೂ ಮೃತಪಟ್ಟರೆ ಶವದ ಮುಂದೆ ಕುಟುಂಬಸ್ಥರ ಆಕ್ರಂದನ ಒಂದೆಡೆಯಾದರೆ, ಮತ್ತೊಂದು ಕಡೆ ಗ್ರಾಮಸ್ಥರು ಪ್ರತಿಭಟನೆ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ.
ಈ ಗ್ರಾಮದಲ್ಲಿ ಮತ್ತೊಬ್ಬರು ಸತ್ತಿದ್ದಾರೆ. ಹೂಳಲು ಅವಕಾಶ ಮಾಡಿ ಕೊಡಿ ಎಂದು ಅಧಿಕಾರಿಗಳ ಬಳಿ ಯಾವಾಗಲೂ ಕೇಳಿಕೊಳ್ಳಬೇಕು. ಆದರೆ ಅಧಿಕಾರಿಗಳು ಶವ ಹೂಳಲು ಅವಕಾಶ ಕೊಡದೆ ಪ್ರತೀ ಬಾರಿ ಕೇವಲ ಭರವಸೆ ಕೊಡ್ತಿದ್ದಾರೆ ಹೊರತು ರುದ್ರಭೂಮಿಯನ್ನಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿನ್ನೆಯಷ್ಟೆ ಗ್ರಾಮದ ಜಯರಾಮ್(28) ಎಂಬಾತ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಶವ ಹೂಳಲು ಸ್ಮಶಾನ ಭೂಮಿ ಇಲ್ಲದ್ದಕ್ಕೆ ಶವವನ್ನು ನಂದಿಕೂರು ತಾಂಡಾದ ಬಸ್ ನಿಲ್ದಾದಲ್ಲಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರಲ್ಲದೆ, ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಾತುಕತೆ ನಡೆಸಿದ ಬಳಿಕ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಸರ್ಕಾರಿ ಜಮೀನಿನಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕೇಂದ್ರ ಕಾರಾಗೃಹ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ನಾವು ಸತ್ತರೆ ಎಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.
ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ನಂದಿಕೂರು ಗ್ರಾಮದಲ್ಲಿ ಪ್ರತೀ ಬಾರಿಯೂ ಇದೇ ಗೋಳಾಗಿದೆ. ಕೇಂದ್ರ ಕಾರಾಗೃಹ ಸಿಬ್ಬಂದಿ ಗ್ರಾಮಸ್ಥರಿಗಾಗಿ ಇದ್ದ ರುದ್ರಭೂಮಿ ತಮಗೆ ಸೇರಿದ್ದೆಂದು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. 1964ರಲ್ಲಿ ಕೇಂದ್ರ ಕಾರಾಗೃಹ ಸ್ಥಾಪನೆಯಾಗಿದೆ. ಒಂದಿಷ್ಟು ದಿನ ಶವ ಸಂಸ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗಿರಲಿಲ್ಲ. ಆದರೆ, ಕಳೆದೆರಡು ವರ್ಷಗಳಿಂದ ಅಧಿಕಾರಿಗಳು ಸಮಸ್ಯೆ ಹುಟ್ಟುಹಾಕಿದ್ದಾರಂತೆ.
ಕೇಂದ್ರ ಕಾರಾಗೃಹದ ವರಿಷ್ಠಾಧಿಕಾರಿ ಮತ್ತು ತಹಶೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಈಗಿರೋ ಹಳೆಯ ರುದ್ರಭೂಮಿಯಲ್ಲಿಯೇ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಿ, ಇಲ್ಲವೆ ನಂದಿಕೂರು ಗ್ರಾಮ ಹಾಗೂ ನಂದಿಕೂರು ತಾಂಡಾಗಳಿಗೆ ಪ್ರತ್ಯೇಕ ರುದ್ರಭೂಮಿ ಒದಗಿಸಿಕೊಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 'ಕಲಬುರಗಿ ಜಿಲ್ಲಾ ಉಸ್ತುವಾರಿ ಸ್ಥಳೀಯ ಶಾಸಕರಿಗೆ ವಹಿಸಿ'