ಸೇಡಂ: ಹವಾ ಮಲ್ಲಿನಾಥ ಎಂದೇ ಭಕ್ತರ ಪ್ರಸಿದ್ಧಿ ಪಡೆದಿರುವ ನಿರಗುಡಿಯ ಮಲ್ಲಯ್ಯ ಮಹಾರಾಜ ಅವರ ಸಂಕಲ್ಪದಂತೆ ತಾಲೂಕಿನ ಗಡಿಭಾಗವಾದ ಮುಧೋಳ ಸಮೀಪದ ಗುಂಡೇಪಲ್ಲಿಯಲ್ಲಿ ವಿಜಯಲಿಂಗ ದೇವಸ್ಥಾನ ನಿರ್ಮಿಸಲಾಗಿದ್ದು, ಜ.25 ರಂದು ಕಳಸಾರೋಹಣ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಸಂಚಾಲಕ ವಿಜಯ್ ಕುಮಾರ ಆಡಕಿ ತಿಳಿಸಿದ್ದಾರೆ.
ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಧರ್ಮ ಜಾಗೃತಿಯ ಅವಶ್ಯಕತೆಯನ್ನು ಮನಗಂಡು ಮಲ್ಲಿನಾಥ ಮಹಾರಾಜರು ಲಿಂಗ ಸ್ಥಾಪನೆ ಮಾಡುವ ಮೂಲಕ ಸಾಂಸ್ಕೃತಿ ಮತ್ತು ಧಾರ್ಮಿಕ ಕಲ್ಪನೆ ಜನರಲ್ಲಿ ಬೆಳೆಸಲು ಮುಂದಾಗಿದ್ದಾರೆ. ಅವರ ಸಂಕಲ್ಪದಂತೆ ಜ.25ರಂದು ಜಾತ್ರಾ ಮಹೋತ್ಸವ ಜರುಗಲಿದೆ. ಜ.24ರಂದು ಸಂಜೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಕ್ರೀಡಾ ಪಟುಗಳಿಂದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾತ್ರಿ ಜಾಗರಣೆ, ಭಜನೆ, ಕೀರ್ತನೆ, ದೇಶ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಜ.25ರಂದು ಪೂಜ್ಯ ಮಲ್ಲಿನಾಥ ಮಹಾರಾಜದ ಸಮ್ಮುಖದಲ್ಲಿ ಗುಂಡೇಪಲ್ಲಿ (ಕೆ), ಮುಧೋಳ ಮತ್ತು ಆಡಕಿ ಗ್ರಾಮಸ್ಥರ ವತಿಯಿಂದ ಕಳಸಾರೋಹಣ ಹಾಗೂ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಜರುಗಲಿದೆ. ಈಗಾಗಲೇ ದೇವಸ್ಥಾನದ ಆವರಣದಲ್ಲಿ ಬ್ಯಾಡಗಿಯ ಸಿದ್ದರಾಮ ಸ್ವಾಮೀಜಿ ದೇವಿ ಪುರಾಣ ಪ್ರವಚನ ನಡೆಸಿಕೊಡುತ್ತಿದ್ದು, ಇವರಿಗೆ ಹೇರೂರಿನ ಅಶೋಕ ಕುಮಾರ ಸಂಗೀತ, ಕೃಷ್ಣಾ ಚಂದಾಪೂರ ತಬಲಾ ಸಾಥ್ ನೀಡುತ್ತಿದ್ದಾರೆ.
ಈ ವೇಳೆ ತಾಲೂಕಿನ ಪ್ರಗತಿಪರ ರೈತರು, ಮಾಜಿ ಸೈನಿಕರು, ಕ್ರೀಡಾ ಸಾಧಕರು, ಪರ್ತಕರ್ತರು, ಹಿರಿಯ ನಾಗರಿಕರು, ಸ್ತ್ರೀ ಶಕ್ತಿ ಸಂಘದವರು, ಕಾರ್ಮಿಕರು ಹಾಗೂ ಸಮಾಜ ಸೇವಕರನ್ನು ಸತ್ಕರಿಸಲಾಗುತ್ತಿದೆ ಎಂದು ತಿಳಿಸಿದರು.